ಧಾರವಾಡ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಒಂದು ದೇಶ ಒಂದು ಪಠ್ಯ (ಒನ್ ನೇಷನ್ ಒನ್ ಸಿಲ್ಯಾಬಸ್) ಹೆಸರಿನಲ್ಲಿ ವಿವಿಧ ಹುದ್ದೆಗೆ ತರಬೇತಿ ನೀಡಿ ಆನಂತರ ಕೇಂದ್ರ ಸರ್ಕಾರದಲ್ಲಿ ಉನ್ನತ ಮಟ್ಟದ ನೌಕರಿ ಕೊಡಿಸುವುದಾಗಿ ಆಮಿಷ ಒಡ್ಡಿ ರಾಘವೇಂದ್ರ ಕಟ್ಟಿ ಎಂಬುವವರು ನಡೆಸಿದ ಹಗರಣ ಪ್ರತಿನಿತ್ಯ ಒಂದಿಲ್ಲೊಂದು ಹೊಸ ಸ್ವರೂಪ ಪಡೆದುಕೊಳ್ಳುತ್ತಲೇ ಇದೆ.
ಈಗಾಗಲೇ ವಂಚನೆ ಪ್ರಕರಣದಡಿ ರಾಘವೇಂದ್ರ ಕಟ್ಟಿ ಅವರ ಮೇಲೆ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿವೆ. ಇದೀಗ ರಾಘವೇಂದ್ರ ಕಟ್ಟಿ ಅವರ ಮೇಲೆ ಮತ್ತೆ ಬರೊಬ್ಬರಿ 1 ಕೋಟಿ 30 ಲಕ್ಷ ರೂಪಾಯಿ ವಂಚನೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಧಾರವಾಡದ ಕಮಲಾಪುರ ಕ್ರಾಸ್‌ನಲ್ಲಿ ರಾಘವೇಂದ್ರ ಕಟ್ಟಿ ಅವರು ಎಸ್‌ಜಿಎಸ್ಎಸ್‌ಎಚ್ಆರ್ ಕನ್ಸಲ್ಟೆನ್ಸಿ ನಡೆಸುತ್ತಿದ್ದರು. ಅದರ ಮೂಲಕ ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಅನೇಕ ಅಭ್ಯರ್ಥಿಗಳಿಗೆ ವಂಚನೆ ನಡೆಸಿದ್ದಾರೆ. ಎಸ್‌ಜಿಎಸ್ಎಸ್‌ಎಚ್ಆರ್ ಕನ್ಸಲ್ಟೆನ್ಸಿ ಹೆಸರಿನಡಿಯೇ ಶ್ರೀಕಾಂತ ತಿಮ್ಮಾಪುರ ಎಂಬುವವರು ಹಾವೇರಿ ಮತ್ತು ರಾಣೆಬೆನ್ನೂರಿನಲ್ಲಿ ಬ್ರ್ಯಾಂಚ್ ತೆರೆಯುವುದಕ್ಕಾಗಿ ಪರವಾನಿಗಿ ಪಡೆದಿದ್ದರು.
ಶ್ರೀಕಾಂತ ತಿಮ್ಮಾಪುರ ಮುಂದೆಯೇ ರಾಘವೇಂದ್ರ ಕಟ್ಟಿ ಅವರು ಅನೇಕ ಅಭ್ಯರ್ಥಿಗಳಿಂದ 1 ಕೋಟಿ 30 ಲಕ್ಷ ಹಣ ಪಡೆದು ವಂಚನೆ ನಡೆಸಿದ್ದಾರೆ ಎಂದು ಇದೀಗ ಶ್ರೀಕಾಂತ ಅವರು ಆರೋಪಿಸಿದ್ದಾರೆ.
ಧಾರವಾಡದ ಉಪನಗರ ಠಾಣೆಯಲ್ಲಿ ಶ್ರೀಕಾಂತ ಅವರು ಈ ಸಂಬಂಧ ದೂರು ದಾಖಲಿಸಲು ಮುಂದಾಗಿದ್ದು, ಅವರು ದೂರು ದಾಖಲಿಸಿದ್ದೇ ಆದಲ್ಲಿ ರಾಘವೇಂದ್ರ ಕಟ್ಟಿ ಅವರ ಮೇಲೆ ಮೂರನೇ ವಂಚನೆ ಪ್ರಕರಣ ದಾಖಲಾದಂತಾಗುತ್ತದೆ.
Kshetra Samachara
27/03/2022 03:51 pm