ಧಾರವಾಡ: 'ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಒಂದು ದೇಶ ಒಂದು ಪಠ್ಯದ (ಒನ್ ನೇಷನ್ ಒನ್ ಸಿಲ್ಯಾಬಸ್) ಹೆಸರಿನಲ್ಲಿ ವಿವಿಧ ಹುದ್ದೆಗೆ ತರಬೇತಿ ನೀಡ್ತೇವೆ. ಆನಂತರ ಕೇಂದ್ರ ಸರ್ಕಾರದಲ್ಲಿ ಉನ್ನತ ಮಟ್ಟದ ನೌಕರಿ ಕೊಡಿಸುತ್ತೇವೆ'. ಹೀಗಂತ ಆಮಿಷ ಒಡ್ಡಿದ ರಾಘವೇಂದ್ರ ಕಟ್ಟಿ, ಪೂರ್ಣಿಮಾ ಸೊಪ್ಪಿಮಠ ಹಾಗೂ ಇತರರು ನಮಗೆ ಮೋಸ ಮಾಡಿದ್ದಾರೆಂದು ಆರೋಪಿಸಿ ಅಕ್ಷತಾ ಹಿರೇಮಠ ಎಂಬುವರು ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೇಂದ್ರ ಸರ್ಕಾರಿ ನೌಕರಿ ಕೊಡಿಸುವುದಾಗಿ 2020ರಲ್ಲಿಯೇ 2.40 ಲಕ್ಷ ರೂಪಾಯಿ ಪಡೆದು ಮೂರು ವರ್ಷ ಕಳೆದರೂ ನೌಕರಿ ಕೊಡಿಸದೇ ವಂಚನೆ ಮಾಡಿದ್ದಾರೆ. ಅಲ್ಲದೇ ಕೊಟ್ಟ ಹಣ ವಾಪಸ್ ಕೇಳಿದರೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಈಗಾಗಲೇ ರಾಘವೇಂದ್ರ ಕಟ್ಟಿ ವಿರುದ್ಧ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ದಾಖಲಾದ ಮೂರನೇ 420 ಪ್ರಕರಣ ಇದಾಗಿದೆ.
ಧಾರವಾಡದ ಕಮಲಾಪುರ ಕ್ರಾಸ್‌ನಲ್ಲಿರುವ ಎಸ್‌ಜಿಎಸ್ಎಸ್‌ಎಚ್ಆರ್ ಕನ್ಸಲ್ಟೆನ್ಸಿ ಮೂಲಕ ನಂಬಿಸಿ 2.40 ಲಕ್ಷ ರೂಪಾಯಿ ಪಡೆದು ಆನಂತರ ನೌಕರಿ ಕೊಡಿಸದೇ, ಪಡೆದ ಹಣವನ್ನೂ ಹಿಂತಿರುಗಿಸದೇ ವಂಚಿಸಿದ ಆರೋಪದ ಮೇಲೆ 420 ರ ಅಡಿ ಮೋಸ, ವಂಚನೆ ಹಾಗೂ 506ರ ಅಡಿ ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ.
ನೌಕರಿ ಸಿಗದೇ ಮೂರು ವರ್ಷ ಪರದಾಡಿ ನಂತರ ಮರಳಿ ಹಣ ಕೇಳಿದರೆ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ನೊಂದಿರುವ ಅಭ್ಯರ್ಥಿ ಗದಗ ಮೂಲದ ಅಕ್ಷತಾ ಹಿರೇಮಠ ಎಂಬುವರು ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ..
Kshetra Samachara
25/03/2022 07:29 pm