ವರದಿ: ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ: ಆತ ಛೋಟಾ ಬಾಂಬೆ ಖ್ಯಾತಿಯ ಹುಬ್ಬಳ್ಳಿಯ ರೌಡಿಶೀಟರ್. ಮೊದಲೆಲ್ಲ ರೌಡಿಸಂ ಮಾಡಿ ಈಗಷ್ಟೇ ಸೋಶಿಯಲ್ ವರ್ಕರ್ ಅಂತ ಗುರುತಿಸಿಕೊಂಡಿದ್ದ. ಆದರೆ ಮಾಡಿದ ಪಾಪ ಬಿಡದೇ ಈಗ ಬೀದಿಯಲ್ಲಿಯೇ ಜೀವ ಕಳೆದುಕೊಂಡಿದ್ದಾನೆ. ಹಾಗಿದ್ದರೇ ಯಾರು ಆ ರೌಡಿಶೀಟರ್...? ಅಲ್ಲಿ ಆಗಿದ್ದಾದರೂ ಏನು ಅಂತೀರಾ.? ಇಲ್ಲಿದೆ ನೋಡಿ ರೌಡಿಶೀಟರ್ ರಕ್ತ ಚರಿತ್ರೆ.
ಹೀಗೆ ರಸ್ತೆ ಉದ್ದಕ್ಕೂ ಹರಿದಿರುವ ನೆತ್ತರು. ರಾತ್ರಿಯೇ ಜೀವ ಹೋಗಿ ಬೆಳಗಿನ ಹೊತ್ತಿಗಾಗಲೇ ಹೆಪ್ಪುಗಟ್ಟಿದ ರಕ್ತದ ಕಲೆಗಳು. ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಯ ಅರವಿಂದನಗರ. ಹೌದು. ನಡುರಾತ್ರಿಯಲ್ಲಿಯೇ ರೌಡಿಶೀಟರ್ ಒಬ್ಬನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅರವಿಂದ್ ನಗರದ ಪಿಎನ್‌ಟಿ ಕ್ವಾಟರ್ಸ್ ಹಿಂದಿನ ರಸ್ತೆಯಲ್ಲಿ ನಡೆದಿದೆ.
ತೊರವಿಹಕ್ಕಲದ ನಿವಾಸಿ ರೌಡಿಶೀಟರ್ ಅಕ್ಬರ್ ಮುಲ್ಲಾ ಎಂಬುವವನೇ ಕೊಲೆಯಾದ ದುರ್ದೈವಿ. ರಾತ್ರಿ ಊಟ ಮಾಡಿ ಮನೆಯಿಂದ ಹೊರ ಹೋದ ಗಂಡ ಕೊಲೆಯಾಗಿರುವ ಸುದ್ದಿ ಕೇಳಿ ಹೆಂಡತಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿದೆ. ನನ್ನ ಗಂಡ ಯಾರ ಜೊತೆಯಲ್ಲಿಯೂ ಇತ್ತೀಚಿಗೆ ಜಗಳ ಮಾಡಿದ್ದಿಲ್ಲ. ಯಾರೊಂದಿಗೂ ವ್ಯವಹಾರ ಕೂಡ ಮಾಡಿದ್ದಿಲ್ಲ ಅಂತಿದ್ದಾರೆ ಕೊಲೆಯಾದ ಅಕ್ಬರ್ ಮುಲ್ಲಾನ ಪತ್ನಿ.
ಇಷ್ಟು ದಿನ ತಣ್ಣಗಿದ್ದ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮತ್ತೆ ನೆತ್ತೆರು ಹರೆದಿದ್ದು, ಮಾರಾಕಾಸ್ತ್ರಗಳು ಸದ್ದು ಮಾಡುತ್ತಿವೆ. ದುಡ್ಡಿನ ವ್ಯವಹಾರದ ಹಿನ್ನೆಲೆಯಲ್ಲಿ ಅಕ್ಬರ್ ಮುಲ್ಲಾ ಎಂಬುವ ವ್ಯಕ್ತಿಯನ್ನು ಮಾರಕಾಸ್ತ್ರದಿಂದ ಬರ್ಬರವಾಗಿ ಕೊಲೆ ಮಾಡಲಾಗಿದೆ. ಸದಾನಂದ ಕುರ್ಲಿ ಎಂಬುವ ವ್ಯಕ್ತಿ ಜೊತೆಗೆ ಹಣಕಾಸಿನ ವಿಷಯದಲ್ಲಿ ರಾತ್ರಿ ಗಲಾಟೆ ನಡೆದಿದ್ದು, ಇದೇ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಜಗಳ ಅತಿರೇಕಕ್ಕೆ ಹೋಗಿದೆ. ಅಕ್ಬರ್ ಮುಲ್ಲಾ ತಂದಿದ್ದ ಮಚ್ಚಿನಿಂದ ಹಲ್ಲೆ ಮಾಡಿದಾಗ ಸದಾನಂದ ಕುರ್ಲಿ ತಪ್ಪಿಸಿಕೊಂಡು, ಅದೇ ಆಯುಧ ದಿಂದ ಸದಾನಂದ ಅಕ್ಬರ್ ಮೇಲೆ ತೆಲೆಗೆ ಹಲ್ಲೆ ಮಾಡಿದ್ದು ಇದರಿಂದ ಸ್ಥಳದಲ್ಲಿ ಅಕ್ಬರ್ ಸಾವನ್ನಪ್ಪಿದ್ದಾನೆ. ಆದರೆ ಕೊಲೆ ಮಾಡಿದ ಆರೋಪಿ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.
ಒಟ್ಟಿನಲ್ಲಿ ಹಣದ ವಿಷಯಕ್ಕೆ ಕೊಲೆಯಾಗಿದೆ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದರೂ ಕೊಲೆಯ ಬಗ್ಗೆ ತನಿಖೆ ಮಾಡಿ ನ್ಯಾಯ ಒದಗಿಸಬೇಕು ಎಂದು ಕುಟುಂಬದವರು ಆಗ್ರಹಿಸಿದ್ದು,ಪೊಲೀಸರು ಕೊಲೆಯ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದಾರೆ.
Kshetra Samachara
11/03/2022 05:14 pm