ಕುಂದಗೋಳ : ಇಡೀ ಕುರುಬ ಸಮುದಾಯವನ್ನೇ ಬೆಚ್ಚಿ ಬೀಳಿಸಿದ ಯರಗುಪ್ಪಿಯಲ್ಲಿ ನಡೆದ ಕುರಿಗಾಹಿ ಮಹಿಳೆ ಅತ್ಯಾಚಾರ ಕೊಲೆ ಪ್ರಕರಣ ಇದೀಗ ಕುರಿಗಾಹಿಗಳಲ್ಲಿ ಆತಂಕ ತಂದಿದೆ.
ಸದ್ಯ ಕುರಿಗಾಯಿಗಳು ಕುರಿ ಕಾಯುವುದೋ ಅಥವಾ ದಡ್ಡಿಯಲ್ಲೇ ಉಳಿದುಕೊಂಡು ಕುರಿಗಾಹಿ ಮಹಿಳೆಯರ ಮಾನ ಕಾಯುವುದೋ ಎನ್ನುವ ಚಿಂತೆಯಲ್ಲಿದ್ದಾರೆ.
ಪ್ರತಿ ವರ್ಷ ಕುರಿಗಾಹಿಗಳು ಅನ್ನ ಅರಸಿ ಊರೂರು ಸುತ್ತುವ ಕಾಯಕಕ್ಕೆ, ಇತ್ತೀಚೆಗೆ ನಡೆದ ಕುರಿಗಾಹಿ ಮಹಿಳೆ ಲಕ್ಷ್ಮೀ ಮೇಲಿನ ಅತ್ಯಾಚಾರ ಕೊಲೆ ಘಟನೆ ಅಕ್ಷರಶಃ ಕುರುಬ ಸಮುದಾಯಕ್ಕೆ ಮಾಸದ ಬರೆ ಎಳೆದಂತಾಗಿದೆ.
ಸದ್ಯ ಊರ ಹೊರಗೆ ವಾಸವಾಗಿರುವ ಕುರಿಗಾಹಿಗಳು ಆತಂಕದಲ್ಲೇ ಜೀವನ ನಡೆಸುತ್ತಾ ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿ ನಮಗೆ ರಕ್ಷಣೆ ಕೊಡಿ ಎನ್ನುತ್ತಿದ್ದಾರೆ.
ಕುಂದಗೋಳ ತಾಲೂಕಿನ ಎಲ್ಲೇಡೆ 200 ಕ್ಕೂ ಹೆಚ್ಚು ಕುರಿಗಾಹಿಗಳು ವಾಸವಿದ್ದು ಅದರಲ್ಲಿ ಒಂಟಿ ಮಹಿಳೆಯರು, ಮಕ್ಕಳು ಕುರಿ ಕಾಯಲು ಹೊರಡುತ್ತಾರೆ, ಇವರ ರಕ್ಷಣೆ ಯಾರ ಜವಾಬ್ದಾರಿ ? ಎಂಬುದೇ ಮೋಸದ ಪ್ರಪಂಚದಲ್ಲಿ ತಿಳಿಯದಾಗಿದ್ದಾನೆ ಹಾಲು ಮನಸಿನ ಕುರುಬ.
ಇನ್ನೂ ತನ್ನ 80 ವರ್ಷ ಕುರಿಗಾಹಿ ಬದುಕಿನಲ್ಲಿ ಅತ್ಯಾಚಾರ, ಕೊಲೆ ಎಂಬ ಶಬ್ದವೇ ಕೇಳಿರದ ಹಿರಿಯ ಕುರಿಗಾಹಿ ಯಪ್ಪಾ ನಮಗೆ ರಕ್ಷಣೆ ಕೊಡ್ರಿ ! ಎನ್ನುವ ಮಾತು ಅವರ ಮಳೆ, ಚಳಿ, ಕಲ್ಲು, ಮುಳ್ಳು, ಬೀಸಿಲು ಹಾದಿಯ ಬದುಕಿಗಿಂತ ಘೋರ ಎನಿಸುತ್ತದೆ.
ಯರಗುಪ್ಪಿಗೆ ಕುರಿ ಕಾಯಲು ಬಂದ ಲಕ್ಷ್ಮೀ ಹೆಣವಾಗಿ ಸ್ಮಶಾನ ಸೇರಿದಂತಹ ಪ್ರಕರಣಕ್ಕೆ ಕಡಿವಾಣ ಹಾಕಲು ಆಯಾ ಜಿಲ್ಲೆ, ತಾಲೂಕು ವ್ಯಾಪ್ತಿಯ ಸ್ಥಳೀಯ ಪೊಲೀಸರು, ಗ್ರಾಮ ಪಂಚಾಯ್ತಿ ಸ್ಥಳೀಯರು ಕುರಿಗಾಹಿಗಳ ರಕ್ಷಣೆ ಬನ್ನಿ ಎನ್ನುವ ಕಂಬಳಿ ಹೊತ್ತ ಮಕ್ಕಳ ಧ್ವನಿಗೆ ಸ್ಪಂದನೆ ಬೇಕಿದೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
04/03/2022 10:42 pm