ಹುಬ್ಬಳ್ಳಿ: ಆತ ಶಿಕ್ಷಕನಾಗಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದ. ಆದರೆ ಮೋಸಗಾರರ ಬಣ್ಣದ ಮಾತಿಗೆ ಮರುಳಾಗಿ ತನ್ನ ಬದುಕನ್ನೇ ಕತ್ತಲಾಗಿಸಿಕೊಂಡಿದ್ದಾನೆ. ಹೊರ ರಾಜ್ಯದಿಂದ ಬಂದ ವಂಚಕರ ಬಲೆಗೆ ಶಿಕ್ಷಕ ಬಿದ್ದಿದ್ದಾದರೂ ಹೇಗೆ ? ಅಲ್ಲಿ ನಡೆದಿದ್ದಾದರೂ ಏನು ಅಂತೀರಾ ? ಈ ಸ್ಟೋರಿ ನೋಡಿ.
ಹೀಗೆ ಎರಡು ಕೈ ಹಾಗೂ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡ ಈ ವ್ಯಕ್ತಿ ಹಳೆ ಹುಬ್ಬಳ್ಳಿಯ ನಿವಾಸಿ. ನಿವೃತ್ತ ಹೈಸ್ಕೂಲ್ ಶಿಕ್ಷಕರಾದ ರಫೀಕ್ ಅಹ್ಮದ್ ಬೆಂಗಳೂರಿ. ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಬಸ್ ಅಪಘಾತವೊಂದರಲ್ಲಿ ಗಾಯಗೊಂಡಿದ್ದರು. ಅಲ್ಲದೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸ್ಪಾಂಡಿಲೈಸಸ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ದುರಾದೃಷ್ಟವಶಾತ್ ಆಂಧ್ರ ಪ್ರದೇಶದಿಂದ ಬಂದ ನಕಲಿ ವೈದ್ಯರು, ಈ ಶಿಕ್ಷಕರಿಗೆ ಬಣ್ಣದ ಮಾತುಗಳನ್ನು ಹೇಳಿ ಸುಮಾರು ಇಪ್ಪತ್ತು ಸಾವಿರ ರೂಪಾಯಿ ಹಣ ಹಾಗೂ ಐವತ್ತು ಸಾವಿರ ರೂಪಾಯಿ ಸೆಲ್ಪ್ ಚೆಕ್ ಪಡೆದುಕೊಂಡು ಪರಾರಿಯಾಗಿದ್ದಾನೆ.
ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಹೆಸರನ್ನು ಹೇಳಿ ಬೈದ್ಯನಾಥ ಕಂಪನಿಯ ಹೆಸರಲ್ಲಿ ಚಿಕಿತ್ಸೆ ನೀಡಿ ಗುಣ ಪಡಿಸುತ್ತೇವೆ ಎಂದು ಹೇಳಿ ಎಂಟು ದಿನಗಳ ಕಾಲ ಚಿಕಿತ್ಸೆ ನಾಟಕವಾಡಿ ಹಣ ಪಡೆದು ಕಾಲು ಕಿತ್ತಿದ್ದಾನೆ. ವಂಚಕರ ವಂಚನೆಗೆ ಒಳಗಾದ ಕುಟುಂಬ ಕಣ್ಣೀರಿನಲ್ಲಿ ಈಗ ಕೈ ತೊಳೆಯುತ್ತಿದೆ.
ಈ ಕುರಿತು ಈ ಶಿಕ್ಷಕ ಆಂಧ್ರ ಪ್ರದೇಶದ ಸಿಎಂ ಗೆ ಪತ್ರ ಬರೆದಿದ್ದಾರೆ. ಅಲ್ಲದೇ ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಕೂಡ ಪ್ರಕರಣ ದಾಖಲಾಗಿದೆ. ಕೆಲಸದಿಂದ ನಿವೃತ್ತಿ ಪಡೆದು ಬರುವ ಪಿಂಚಣಿ ಹಣದಲ್ಲಿಯೇ ಜೀವನ ನಡೆಸುತ್ತಿರುವ ಇವರಿಗೆ, ಈಗ ಕೈ-ಕಾಲು ಸ್ವಾಧೀನ ಕಳೆದುಕೊಂಡಿರುವುದಕ್ಕೆ ಕುಟುಂಬದವರೇ ಊಟ ಉಪಚಾರ ಮಾಡುವಂತಾಗಿದೆ. ಕೆಲಸವನ್ನು ಬಿಟ್ಟು ಇವರ ಉಪಚಾರವನ್ನೇ ಮನೆಯವರು ಮಾಡುವ ಪರಿಸ್ಥಿತಿ ಇದೆ. ಮನೆಯ ನಿರ್ವಹಣೆಯೇ ಕೂಡ ಇವರಿಗೆ ದೊಡ್ಡ ಹೊರೆಯಾಗಿದೆ. ವಂಚಕರ ಮಾತಿಗೆ ಮರುಳಾಗಿ ಹಣವನ್ನು ಕಳೆದುಕೊಂಡು ಸಂಕಷ್ಟದ ಸ್ಥಿತಿಗೆ ಈಗ ಈ ಕುಟುಂಬ ಸಿಲುಕಿದೆ.
-ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
27/02/2022 02:15 pm