ಧಾರವಾಡ: ಆತ ಪ್ರತಿನಿತ್ಯ ಪೊಲೀಸ್ ವಾಹನ ಕ್ಲೀನ್ ಮಾಡ್ತಿದ್ದ. ವೃತ್ತಿಯಿಂದ ಖಾಸಗಿ ಸಂಸ್ಥೆಯ ವಾಹನ ಚಾಲಕನಾಗಿಯೂ ಕರ್ತವ್ಯ ನಿರ್ವಹಿಸಿದ್ದ. ಪೊಲೀಸ್ ಠಾಣೆಯಲ್ಲಿ ಪ್ರತಿನಿತ್ಯ ಪೊಲೀಸರ ಗತ್ತು, ಗಾಂಭೀರ್ಯ ನೋಡಿ ತಾನೂ ಒಂದು ದಿನ ಆ ರೀತಿ ಕರ್ತವ್ಯ ನಿರ್ವಹಿಸಲೇಬೇಕು ಎಂದು ಕೊನೆಗೆ ಪೊಲೀಸ್ ವಾಹನವನ್ನೇ ಕದ್ದು ಪರಾರಿಯಾಗಿ ರಸ್ತೆಯಲ್ಲಿ ಪೊಲೀಸರಂತೆ ಕರ್ತವ್ಯವನ್ನೂ ನಿರ್ವಹಿಸುತ್ತಿದ್ದ.
ಯಾರಪ್ಪ ಆ ವ್ಯಕ್ತಿ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ. ಈ ಫೋಟೋದಲ್ಲಿ ಕಾಣುತ್ತಿರುವ ವ್ಯಕ್ತಿಯ ಹೆಸರು ನಾಗಪ್ಪ ಅಂತ. ನಿನ್ನೆಯಷ್ಟೇ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಪೊಲೀಸ್ ಠಾಣೆಯ ಸರ್ಕಾರಿ ಪೊಲೀಸ್ ಜೀಪನ್ನೇ ಎಗರಿಸಿ ಪರಾರಿಯಾಗಿದ್ದ. ಇದಕ್ಕೆ ಹಿನ್ನೆಲೆಯೇ ಬೇರೆಯೇ ಇದೆ. ಈತ ಪ್ರತಿನಿತ್ಯ ಠಾಣೆಗೆ ಬಂದು ವಾಹನ ಕ್ಲೀನ್ ಮಾಡಿ ಕೊಡ್ತಿದ್ದ. ನಿನ್ನೆ ಪೊಲೀಸರು ನೈಟ್ ರೌಂಡ್ ಮುಗಿಸಿಕೊಂಡು ವಾಹನವನ್ನು ಠಾಣೆಗೆ ತಂದು ನಿಲ್ಲಿಸಿದ್ದರು. ಆಗ ಸಮಯ ನೋಡಿ ನಾಗಪ್ಪ ಆ ವಾಹನವನ್ನು ಎಗರಿಸಿಕೊಂಡು ಹೈವೆಗೆ ಬಂದು ವಾಹನಗಳ ತಪಾಸಣೆ ಮಾಡ್ತಿದ್ದ. ವಾಹನಗಳು ಹೈವೆದಲ್ಲಿ ಯಾವ ರೀತಿ ಹೋಗಬೇಕು ಎಂದು ಪೊಲೀಸರಂತೆ ಕರ್ತವ್ಯ ನಿರ್ವಹಿಸುತ್ತಿದ್ನಂತೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಏನು ಹೇಳಿದ್ದಾರೆ ಕೇಳಿ ನೋಡಿ.
ನಾಗಪ್ಪ ಯಾವುದೇ ಕ್ರೈಂ ಮಾಡಬೇಕು ಎಂಬ ಉದ್ದೇಶದಿಂದ ಈ ರೀತಿ ಪೊಲೀಸ್ ವಾಹನ ಕಳ್ಳತನ ಮಾಡಿರಲಿಲ್ವಂತೆ. ತಾನೂ ಒಂದು ದಿನ ಪೊಲೀಸರಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಈ ರೀತಿಯ ಕೆಲಸ ಮಾಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಏನೇ ಆಗಲಿ ಕಳ್ಳತನ ಪ್ರಕರಣ ಪತ್ತೆ ಮಾಡುವ ಪೊಲೀಸರ ವಾಹನವನ್ನೇ ಕಳ್ಳತನ ಮಾಡಿರುವುದು ದೊಡ್ಡ ಸಂಗತಿ. ಇದೀಗ ಈ ಲೋಪ ಹೇಗೆ ಆಯ್ತು? ಆತ ಯಾವ ಕೀಲಿ ಬಳಸಿ ವಾಹನ ಕದ್ದೊಯ್ದ ಎಂಬ ತನಿಖೆ ನಡೆಸಲಾಗುತ್ತಿದೆ. ಅಲ್ಲದೇ ಸಂಬಂಧಿಸಿದ ಠಾಣಾಧಿಕಾರಿಗೆ ಕಾರಣ ಕೇಳಿ ನೋಟಿಸ್ ಕೂಡ ಜಾರಿ ಮಾಡಲಾಗಿದೆ ಎಂದು ಎಸ್ಪಿ ಕೃಷ್ಣಕಾಂತ ತಿಳಿಸಿದ್ದಾರೆ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
Kshetra Samachara
04/02/2022 04:32 pm