ಹುಬ್ಬಳ್ಳಿ: ರಾಜ್ಯಾದ್ಯಂತ ಸದ್ಯ ಬಿಟ್ ಕಾಯಿನ್ ದಂಧೆ ಚರ್ಚೆಯಲ್ಲಿರುವಾಗ ನೆಕ್ಸ್ ಕಾಯಿನ್ ಟ್ರೇಡಿಂಗ್ ಹೆಸರಲ್ಲಿ ನಗರದ ವ್ಯಕ್ತಿಯೊಬ್ಬರ ಖಾತೆಯಿಂದ 8.13 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಗರದಲ್ಲಿ ಇತ್ತೀಚೆಗೆ ನಡೆದಿದೆ.
ಜಯನಗರ ನಿವಾಸಿ ಪ್ರಕಾಶ ಲಕಮನಹಳ್ಳಿ ವಂಚನೆಗೀಡಾದವರು. ವ್ಯಕ್ತಿಯೊಬ್ಬ ಪ್ರಕಾಶ ಅವರನ್ನು 'ನೆಕ್ಸ್ ಇನ್‌ವೆಸ್ಟಮೆಂಟ್123' ಎಂಬ ಹೆಸರಿನ ವಾಟ್ಸ್ ಆ್ಯಪ್ ಗ್ರೂಪ್‌ಗೆ ಸೇರಿಸಿದ್ದ. ಆದರೆ, ಪ್ರಕಾಶ ಅವರು ಗ್ರುಪ್‌ನಿಂದ ಹೊರಗೆ ಹೋಗಿದ್ದರು. ಮತ್ತೊಂದು ನಂಬರ್ ಮೂಲಕ ಬೇರೊಬ್ಬರು ಕರೆ ಮಾಡಿ, ತಾವು ಫ್ಯಾಷನ್ ಡಿಸೈನರ್ ಎಂದು ಹೇಳಿಕೊಂಡಿದ್ದರು. ನೆಕ್ಸ್ ಕಾಯಿನ್ ನಲ್ಲಿ ಹೂಡಿಕೆಯಿಂದ ತಾವು ಲಾಭ ಪಡೆದಿರುವುದಾಗಿ ನಂಬಿಸಿದ್ದರು.
ಬಳಿಕ m.nexcoin.vip ವೆಬ್‌ಸೈಟ್ ಲಿಂಕ್ ಕಳುಹಿಸಿದ್ದರು. ಆ ಲಿಂಕ್ ಕ್ಲಿಕ್ ಮಾಡಿ ಹೆಸರು, ವಿಳಾಸ, ಇ-ಮೇಲ್ ಐಡಿ, ಆಧಾರ್ ಕಾರ್ಡ್, ಫೋಟೋ ಹಾಕಿಸಿಕೊಂಡಿದ್ದರು. ಬಳಿಕ ಬ್ಯಾಂಕ್ ಖಾತೆ ಮೂಲಕ ಹಣ ಹೂಡಿಕೆ ಮಾಡಿ. ನಿಮ್ಮ ಹಣವನ್ನು ಡಾಲರ್ ರೂಪದಲ್ಲಿ ಪರಿವರ್ತಿಸಿ ನಿಮ್ಮ ಪರವಾಗಿ ನೆಕ್ಸ್ ಕಾಯಿನ್‌ನಲ್ಲಿ ಹೂಡಿಕೆ ಮಾಡುತ್ತೇವೆ. ಬಂದ ಲಾಭವನ್ನು ನಿಮ್ಮ ಖಾತೆಗೆ ಜಮೆ ಮಾಡುತ್ತೇವೆ. ಅದರಲ್ಲಿ ನಮಗೆ ಶೇ.20ರಷ್ಟು ಕಮಿಷನ್ ಕೊಡಿ ಎಂದು ನಂಬಿಸಿದ್ದರು. ಬಳಿಕ ಹಂತ ಹಂತವಾಗಿ ಹಣ ಹೂಡಿಕೆ ಮಾಡಿಕೊಂಡು ಲಾಭ ನಷ್ಟ ತೋರಿಸುತ್ತಿದ್ದರು. ಹಣ ಬಿಡಿಸಿಕೊಳ್ಳಲು ಮುಂದಾದಾಗ ಹಣ ಫೀಜ್ ಆಗಿದೆ ಎಂದು ವಂಚಿಸಿದ್ದಾರೆಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೃಹತ್ ಜಾಲ ಶಂಕೆ: ಬಿಟ್ ಕಾಯಿನ್ ದಂಧೆಯಂತೆ ನೆಕ್ಸ್ ಕಾಯಿನ್ ದಂಧೆಯಲ್ಲೂ ಬೃಹತ್ ಜಾಲ ಇರುವ ಶಂಕೆ ವ್ಯಕ್ತವಾಗಿದೆ. ಅಮಾಯಕರನ್ನು ಬಲೆಗೆ ಕೆಡವಿಕೊಂಡು ಹಣ ಪಡೆದು ವಂಚಿಸುವ ಜಾಲ ಸಕ್ರಿಯವಾಗಿದೆ ಎಂಬ ಆರೋಪವಿದೆ.
Kshetra Samachara
09/11/2021 09:31 am