ಹುಬ್ಬಳ್ಳಿ: ಪಂಜಾಬ್ ನಲ್ಲಿ ಕೆಲಸ ಮಾಡುತ್ತಿರುವ ಧಾರವಾಡ ಜಿಲ್ಲೆ ಮೂಲದ ಬಿಎಸ್ ಎಫ್ ಯೋಧನೊಬ್ಬ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಮತ್ತೊಂದು ಮದುವೆ ಆಗುವ ಮೂಲಕ ಯುವತಿಯೊಬ್ಬರಿಗೆ ವಂಚಿಸಿದ್ದಾರೆಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಣ್ಣಿಗೇರಿ ತಾಲೂಕಿನ ನಲವಡಿ ಗ್ರಾಮ ಮೂಲದ ಬಿಎಸ್ ಎಫ್ ಯೋಧ ಗುರುಸಿದ್ದಪ್ಪ ಶಿರೋಳ ವಂಚಿಸಿರುವ ಆರೋಪಿ, ಗದಗ ಜಿಲ್ಲೆ ರೋಣ ತಾಲೂಕು ಮೂಲದ, ಸದ್ಯ ಇಲ್ಲಿನ ವಿದ್ಯಾನಗರದಲ್ಲಿ ವಾಸವಾಗಿರುವ ಯುವತಿ ವಂಚನೆಗೀಡಾದವರು.
ಮ್ಯಾಟ್ರಿಮೋನಿಯೊಂದರಲ್ಲಿ ಯುವತಿ ಹೆಸರು ನೋಂದಾಯಿಸಿದ್ದರು. ಈ ಮೂಲಕ ಪರಿಚಿತನಾಗಿದ್ದ ಗುರುಸಿದ್ದಪ್ಪ ಮೊಬೈಲ್ ಮೂಲಕ ಸಂಪರ್ಕಿಸಿ ಮದುವೆಯಾಗುವುದಾಗಿ ನಂಬಿಸಿದ್ದ. ನಂತರ ಪಂಜಾಬ್ ನಿಂದ ಆಗಾಗ ರಜೆ ಮೇಲೆ ಇಲ್ಲಿಗೆ ಬರುತ್ತಿದ್ದರು. ನವೆಂಬರ್ 2019ರಲ್ಲಿ ಉಣಕಲ್‌ನಲ್ಲಿ ಬಾಡಿಗೆ ಮನೆ ಮಾಡಿದ್ದರು. ಒತ್ತಾಯಪೂರ್ವಕವಾಗಿ ನಿರಂತರವಾಗಿ ದೈಹಿಕ ಸಂಪರ್ಕ ಹೊಂದಿದ್ದರು.
ನಂತರ ನನಗೆ ಗೊತ್ತಾಗದಂತೆ ಮತ್ತೊಬ್ಬ ಯುವತಿಯನ್ನು ಮದುವೆಯಾಗಿದ್ದಾರೆಂದು ನೊಂದ ಯುವತಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ.
Kshetra Samachara
01/11/2021 10:06 am