ಹುಬ್ಬಳ್ಳಿ: ಐಪಿಎಲ್ ಕ್ರಿಕೆಟ್ ಪಂದ್ಯದ ಮೇಲೆ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದವರನ್ನು ಬಂಧಿಸಿ 23,488 ರೂ. ನಗದು ಮತ್ತು ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಂಡ ಘಟನೆ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಕವಲಪೇಟೆ ನಿವಾಸಿಗಳಾದ ಅಬಿದಲ್ ಚೌಧರಿ (28), ಅಬ್ದುಲ್ ರಜಾಕ್ ತಾಳಿಕೋಟಿ (29), ಗೌಸಿಯಾಟೌನ ನ ಮುಜಾಫರ್ ಸವಣೂರ (28), ಮಹ್ಮದಸಲೀಂ ಶೇಖ (30), ಸದರ ಸೋಪಾದ ಇಲಿಯಾಸ್ ಚೌಧರಿ (33), ದಿವಟಗಿ ಓಣಿಯ ಮಾಜೀದ್ ಖಾನ್ ಪಠಾಣ(35) ಎಂಬುವರನ್ನು ಬಂಧಿಸಲಾಗಿದೆ.ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ಸೆ. 30 ರಂದು ಸಂಜೆ 7:30 ಗಂಟೆ ಸುಮಾರಿಗೆ ಇಲ್ಲಿನ ದಾಜೀಬಾನ್ ಪೇಟೆ ಎಸ್.ಟಿ.ಬಂಡಾರಿ ಕ್ರಾಸ್ ಹತ್ತಿರ ಇರುವ ಗಣಪತಿ ದೇವಸ್ಥಾನದ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ಮಧ್ಯ ನಡೆಯುತ್ತಿದ್ದ ಕ್ರಿಕೆಟ್ ಆಟದ ಮೇಲೆ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಉಪನಗರ ಠಾಣೆ ಇನ್ಸ್ಪೆಕ್ಟರ್ ರವಿಚಂದ್ರ ಡಿ.ಬಿ ಅವರ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸ್ ವಿಶೇಷ ತಂಡವು, ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
01/10/2021 12:14 pm