ಅಳ್ನಾವರ: ತಾಲೂಕಿನ ಹುಲಿಕೇರಿ ಗ್ರಾಮದ ಇಂದಿರಮ್ಮನ ಕೆರೆಗೆ ಅಡ್ಡಲಾಗಿ ಕಟ್ಟಲಾಗಿದ್ದ ಚೆಕ್ ಡ್ಯಾಮ್‌ನ ಆರು ಕಬ್ಬಿಣದ ಗೇಟ್‌ಗಳನ್ನು ಕದ್ದ ಕಳ್ಳರು ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಘಟನೆ ಹುಲಿಕೇರಿ ಗ್ರಾಮದಲ್ಲಿ ನಡೆದಿದೆ.
ಹುಲಿಕೇರಿ ಕೆರೆಯ ನೀರು ಸಂಗ್ರಹಕ್ಕೆ ಚೆಕ್ ಡ್ಯಾಮ್ ನಿರ್ಮಿಸಿ ಅದಕ್ಕೆ ಆರು ಕಬ್ಬಿಣದ ಗೇಟ್‌ಗಳನ್ನ ನಿರ್ಮಾಣ ಮಾಡಲಾಗಿತ್ತು. ಕಳೆದ ಜುಲೈ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ನೀರಿನ ರಭಸಕ್ಕೆ ಚೆಕ್ ಡ್ಯಾಮ್‌ನ ಆರು ಗೇಟ್‌ಗಳು ಕಿತ್ತು ಬಿದ್ದಿದ್ದವು. ಇದೆ ಸಮಯ ಸಾಧಿಸಿದ್ದ ಗ್ರಾಮದ ಶಕೀಲ ಗೌಂಡಿ, ಮಹಮ್ಮದ್ ಅಲಿಯಾಸ್ ಶಾನೂರ್ ಖುದಾನ್ನವರ, ಶಂಕರ ಕರದಿಗುಡ್ಡ, ಮಲ್ಲಿಕಾರ್ಜುನ ಕರದಿಗುಡ್ಡ ಎಂಬ ಆರೋಪಿಗಳು ಸುಮಾರು 90,000 ರೂ. ಮೌಲ್ಯದ 6 ಗೇಟ್‌ಗಳನ್ನ ಕದ್ದು ಅರಣ್ಯ ಪ್ರದೇಶದಲ್ಲಿ ಬಚ್ಚಿಟ್ಟಿದ್ದರು.
ಈ ಸಂಬಂಧ ಪಟ್ಟ ಅಧಿಕಾರಿಗಳು ಅಳ್ನಾವರ ಪೋಲಿಸ್ ಠಾಣೆಗೆ ದೂರು ದಾಖಲಿಸಿದರು. ಇದರ ಮೂಲ ಬೆನ್ನು ಹತ್ತಿದ ಅಳ್ನಾವರ ಪೋಲಿಸ್ ಠಾಣೆಯ ಪಿಎಸ್‌ಐ ಎಸ್.ಆರ್.ಕಣವಿ ನೇತೃತ್ವದ ತಂಡ ನಾಗರಾಜ ಹಾಲವಾರ, ಮಹಾಂತೇಶ ಮುದ್ದಿನ, ಗುರುನಾಥ ಹೆಬ್ಬಳ್ಳಿ, ಪ್ರವೀಣ ಅಂಗಡಿ, ಜಿ.ಪಿ. ಸನ್ನಮೇಟಿ ಚುರುಕಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇವರು ಕಳುವು ಮಾಡಲು ಉಪಯೋಗಿಸಿದ ಟ್ರ್ಯಾಕ್ಟರ್ ಜೊತೆಗೆ 6 ಗೇಟ್ ಗಳೊಂದಿಗೆ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ. ಇನ್ನೋರ್ವ ಆರೋಪಿ ಮಲ್ಲಿಕಾರ್ಜುನ ಕರಡಿಗುಡ್ಡ ಎಂಬುವವನ ಹುಡುಕಾಟಕ್ಕೆ ಮಿಂಚಿನ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಅಳ್ನಾವರ ಪೊಲೀಸ್ ಠಾಣೆ ಸಿಬ್ಬಂದಿಯ ಈ ಕಾರ್ಯಾಚರಣೆಗೆ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
Kshetra Samachara
22/09/2021 11:52 am