ಹುಬ್ಬಳ್ಳಿ- ತಾನು ಕಾಂಗ್ರೆಸ್ ನ ನಾಯಕಿ ಅಂತ ಹೇಳಿಕೊಂಡ ಆಕೆ, ಬಡ ಜನರನ್ನು ಸುಲಿಗೆ ಮಾಡಲು ನಿಂತಿದ್ದಳು. ಬಡ ಜನರು ಸಹ ಅಲ್ಲೋ ಇಲ್ಲೊ ಸಾಲ ಮಾಡಿ, ಈಕೆಗೆ 2 ವರ್ಷದಿಂದ ಹಣ ನೀಡುತ್ತಾ ಬಂದಿದ್ರು. ಆದ್ರೆ ತಾವು ನೀಡಿದ ಹಣ ಯಾವಾಗ ಹಿಂತಿರುಗಲ್ಲ ಅನ್ನೋದು ಖಾತ್ರಿಯಾಯ್ತೋ ಆಗಲೇ ಪೊಲೀಸ್ ಠಾಣೆ ಮೆಟ್ಟಿಲೇರಿ ಪ್ರಕರಣ ದಾಖಲಿಸಿದ್ದಾರೆ.
ಹೀಗೆ ಕಣ್ಣೀರು ಹಾಕುತ್ತಾ ಹಣ ಕೊಡಿಸಿ ಅಂತ ಅಂಗಲಾಚುತ್ತಿರುವ ಮಹಿಳೆ. ಮತ್ತೊಂದು ಕಡೆ ಹಣ ನೀಡಿ ಮೋಸ ಹೋಗಿರುವ ಮಹಿಳೆಯರ ಆಕ್ರೋಶ. ಈ ದೃಶ್ಯಗಳು ಕಂಡು ಬಂದಿದ್ದು, ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆ ಎದುರು. ಇವರ ಈ ಆಕ್ರೋಶಕ್ಕೆ ಕಾರಣವಾಗಿರೋದು ಕೈ ನಾಯಕಿ ಅಂತ ಗುರುತಿಸಿಕೊಂಡಿರುವ ಪೂರ್ಣಿಮಾ ಸವದತ್ತಿ ವಿರುದ್ಧ. ಹೌದು ಬ್ಯಾಂಕ್ ನಲ್ಲಿ ಸಾಲ ಕೊಡಿಸುತ್ತೇನೆ ಅಂತ ಸ್ಥಳೀಯ ಜನರ ಬಳಿ ಹಣ ಪಡೆದಿರುವ ಪೂರ್ಣಿಮಾ, ಜನರಿಗೆ ಲೋನ್ ಕೊಡಿಸದೆ ಮೋಸ ಮಾಡಿದ್ದಾರೆ ಅಂತ ಜನ ಆರೋಪಿಸಿದ್ದಾರೆ. 35ಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿರುವ ಪೂರ್ಣಿಮಾ, ಲಕ್ಷಾಂತರ ಹಣವನ್ನ ಜನರಿಂದ ಪಡೆದು ವಂಚನೆ ಮಾಡಿದ್ದಾರೆ ಅಂತ ಜನ ಆರೋಪಿಸಿದ್ದಾರೆ..
ಇನ್ನು ಕೇವಲ ಬ್ಯಾಂಕ್ ನಲ್ಲಿ ಲೋನ್ ಕೊಡಿಸೋದಷ್ಟೇ ಅಲ್ಲದೆ, ಸೈಟ್ ಗಳನ್ನು ಕಡಿಮೆ ಬೆಲೆಗೆ ಕೊಡಿಸುತ್ತೇನೆ ಅಂತಲೂ ಜನರಿಗೆ ಪೂರ್ಣಿಮಾ ಮೋಸ ಮಾಡಿದ್ದಾರಂತೆ. ಆಶ್ರಯ ಕಾಲೋನಿ ಯೋಜನೆಯಲ್ಲಿ ಬಡ ಜನರಿಗೆ ಸಿಗುವ ವಸತಿ ಯೋಜನೆಯನ್ನು ಸಹ ಕೊಡಿಸುತ್ತೇನೆ ಅಂತ ಹೇಳಿ ಜನರಿಂದ ಹಣ ಪಡೆಸಿದ್ದಾರಂತೆ. ಕಾಂಗ್ರೆಸ್ ನ ದೊಡ್ಡ ದೊಡ್ಡವರ ಹೆಸರು ಹೇಳಿಕೊಂಡು ಲಕ್ಷಾಂತರ ಹಣವನ್ನ ಜನರಿಂದ ಪಡೆದಿದ್ದಾರೆ. ಡಿಕೆ ಶಿವಕುಮಾರ್ ಸೇರಿದಂತೆ ಶಾಸಕ ಪ್ರಸಾದ್ ಅಬ್ಬಯ್ಯ ರ ಹೆಸರನ್ನ ತಮ್ಮ ಸ್ವಹಿತಕ್ಕಾಗಿ ಬಳಸಿಕೊಂಡು ಬಡ ಜನರಿಂದ ಸುಲಿಗೆ ಮಾಡಿದ್ದಾರೆ ಅಂತ ಮೋಸ ಹೋದವರು ಆರೋಪಿಸುತ್ತಿದ್ದಾರೆ. ಇನ್ನು ವಿದ್ಯಾರ್ಥಿಗಳ ಎಜುಕೇಷನ್ ಲೋನ್ ನ್ನ ಕೊಡಿಸುತ್ತೇನೆ ಅಂತ ವಿದ್ಯಾರ್ಥಿಗಳಿಗೂ ಸಹ ಮೋಸ ಮಾಡಿದ್ದಾರೆ.
ಒಟ್ಟಾರೆ ಕಾಂಗ್ರೆಸ್ ನಾಯಕಿ ಅಂತ ಗುರುತಿಸಿಕೊಂಡಿರುವ ಪೂರ್ಣಿಮಾ ಸವದತ್ತಿ ವಿರುದ್ಧ, ಈಗಾಗಲೇ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲೋನ್ ಸಿಗುತ್ತೆ ಎನ್ನುವ ಆಸೆಗೆ ಬಡ ಜನ ಬೇರೆಯವರಿಂದ ಹಣ ಪಡೆದು ಕೈ ನಾಯಕಿಗೆ ನೀಡಿದ್ದು, ಈಗ ಆ ಕೊಟ್ಟ ಹಣವು ಇಲ್ಲದೆ ಇತ್ತ ಲೋನ್ ಹಣ ಇಲ್ಲದೆ ಕಂಗಾಲಾಗಿರೋದು ಮಾತ್ರ ಸತ್ಯ.....!
Kshetra Samachara
24/02/2021 06:29 pm