ಧಾರವಾಡ: ಜಿಲ್ಲೆಯಲ್ಲಿ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಅಬಕಾರಿ ಹಾಗೂ ಜಾಗೃತ ದಳಗಳು ನಿರಂತರ ಕಾರ್ಯಾಚರಣೆ ಹಾಗೂ ವಿವಿಧ ಸ್ಥಳಗಳಲ್ಲಿ ನಿಗಾವಹಿಸಿದ್ದು, ನವೆಂಬರ 30 ರಿಂದ ಇಲ್ಲಿ(ಡಿ.26)ವರೆಗೆ ಸುಮಾರು 5 ಲಕ್ಷ, 85 ಸಾವಿರ ಮೌಲ್ಯದ ಅಕ್ರಮ ಮದ್ಯ ಹಾಗೂ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಬಕಾರಿ ಕಾಯ್ದೆ 1956 ರ ಅಡಿಯಲ್ಲಿ ಇಲ್ಲಿವರೆಗೆ ಒಟ್ಟು 58 ಪ್ರಕರಣಗಳನ್ನು ಅಬಕಾರಿ ಇಲಾಖೆಯಿಂದ ದಾಖಲಿಸಿ, ತನಿಖೆ ಕೈಗೊಳ್ಳಲಾಗುತ್ತಿದೆ.
ಅಕ್ರಮವಾಗಿ ಮದ್ಯ ದಾಸ್ತಾನು ಹಾಗೂ ಅನುಮತಿ ಪಡೆಯದೇ ಮದ್ಯ ಸೇವೆನೆಗೆ ಅವಕಾಶ ಮಾಡಿಕೊಟ್ಟ ನಿಗದಿ ಗ್ರಾಮದ ದುರ್ಗಾ ಮಾಂಸಾಹಾರಿ ಖಾನಾವಳಿ, ಮುಗದ ಗ್ರಾಮದ ಕಿರಾಣಿ (ಅಂಗಡಿಗೆ ಯಾವುದೇ ಹೆಸರು ಇರುವುದಿಲ್ಲ) ಅಂಗಡಿ, ಯಾದವಾಡ ಗ್ರಾಮದ ಯಲ್ಲಪ್ಪ ಗಂಗಪ್ಪ ಕಣಜನವರ, ಲಕಮಾಪೂರ ಗ್ರಾಮದ ಮಹಾಬಳೇಶ್ವರ ಬಸಪ್ಪ ಮುದಕಣ್ಣವರ ಕಿರಾಣಿ ಅಂಗಡಿ, ಧಾರವಾಡ ಶಹರದ ಮೆ.ಜೈ ಸಂತೋಷಿ ಮಾ ಮತ್ತು ಕಂಪನಿ ಮತ್ತು ಮೈಸೂರ ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್, ಹಾಗೂ ಮೆ: ಗ್ಯಾನಬಾ ಬಾರ್ ಮತ್ತು ರೆಸ್ಟೋರೆಂಟ್, ಹುಬ್ಬಳ್ಳಿ ಶಹರದ ಸಿ.ಎಲ್-2 ಸನ್ನದುದಾರ ಸಂತೋಷ ತುಕಾರಾಮ ಕಲಾಲ ಸೇರದಂತೆ ಜಿಲ್ಲೆಯ ವಿವಿಧ ಪಟ್ಟಣ, ಗ್ರಾಮಗಳಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಮತ್ತು ದಾಳಿ ಮಾಡಿ ಒಟ್ಟು 58 ಪ್ರಕರಣಗಳನ್ನು ದಾಖಲಿಸಿ, ಕ್ರಮಕೈಗೊಂಡಿದೆ.
ದಾಳಿಯಲ್ಲಿ ಇಲ್ಲಿವರೆಗೆ ವಿವಿಧ ಸ್ಥಳ ಹಾಗೂ ಅಂಗಡಿಗಳಿಂದ 393.915 ಲೀಟರ್ ಮದ್ಯ, 31.200 ಲೀಟರ್ ಬೀರ್, 1.440 ಲೀಟರ್ ಗೋವಾ ಮದ್ಯ ಸೇರಿ ಒಟ್ಟು 426 ಲೀಟರ್ ಅಕ್ರಮ ಮದ್ಯ ಹಾಗೂ 7 ದ್ವಿಚಕ್ರ, 1 ಟಾಟಾ ಏಸ್ ಮತ್ತು 1 ಆಟೋ ಸೇರಿ ಒಟ್ಟು 9 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದಾಳಿಯಲ್ಲಿ ವಶಪಡಿಕೊಂಡ ಅಬಕಾರಿ ವಸ್ತುಗಳ ಮೌಲ್ಯ ರೂ.1,70,500 ಗಳು ಮತ್ತು ರೂ.5,85,000 ಗಳು ವಾಹನಗಳ ಮೌಲ್ಯ ಸೇರಿ ಒಟ್ಟು 7,55,500 ರೂ.ಗಳ ಮೌಲ್ಯದ ಅಕ್ರಮ ಮದ್ಯ,ವಾಹನಗಳನ್ನು ಜಪ್ತಿ ಮಾಡಿ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
Kshetra Samachara
26/12/2020 09:04 pm