ಹುಬ್ಬಳ್ಳಿ: ಅವರೆಲ್ಲ ಒಂದೇ ಏರಿಯಾದ ಯುವಕರು. ಜೊತೆಗೆ ಕೂಡಿ-ಆಡಿ ಬೆಳೆದ ಸ್ನೇಹಿತರು. ತಮ್ಮ ಕುಟುಂಬದ ಬಂಡಿಯನ್ನು ಸಾಗಿಸಲು ಎಲ್ಲರೂ ಕೂಡಾ ಒಂದೇ ಕಡೆ ಕೆಲಸ ಮಾಡಲು ಶುರು ಮಾಡಿದ್ದರು. ಈ ಸಾರಿ ಮನೆಯಲ್ಲಿ ಗಣೇಶೋತ್ಸವನ್ನು ವಿಜೃಂಭಣೆಯಿಂದ ಆಚರಣೆ ಮಾಡಬೇಕು ಎಂದು ಹಗಲಿರುಳು ಕೆಲ್ಸ ಮಾಡಿ ಮನೆ ಸೇರಲು ಹೊರಟಿದ್ದ ಆ ಯುವಕರ ಪಾಲಿಗೆ ಅದೊಂದು ಲಾರಿ ಯಮನ ರೂಪದಲ್ಲಿ ಬಂದು ಮೂವರನ್ನು ಮಸಣಕ್ಕೆ ಸೇರಿಸಿಬಿಟ್ಟಿದೆ.
ಹೌದು, ಹೀಗೆ ಲಾರಿ ಅಪಘಾತದಲ್ಲಿ ಮೃತಪಟ್ಟ ಈ ಯುವಕರೆಲ್ಲ ಹುಬ್ಬಳ್ಳಿಯ ಸೆಟ್ಲಿಮೆಂಟ್‌ನ ನಿವಾಸಿಗಳು, ವೃತ್ತಿಯಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸವನ್ನು ಮಾಡುತ್ತಿದ್ದರು. ಕಳೆದ ಒಂದು ವಾರದಿಂದ ಹುಬ್ಬಳ್ಳಿಯ ತಾರಿಹಾಳದಲ್ಲಿ ಕಟ್ಟಡ ಕೆಲಸವನ್ನು ಮಾಡಿ ಗುರುವಾರ ರಾತ್ರಿ ಹು-ಧಾ ಬೈಪಾಸ್ ಮುಖಾಂತರ ಸೆಟ್ಲಿಮೆಂಟ್‌ನತ್ತ ಪ್ರಯಾಣವನ್ನು ಬೆಳೆಸಿದ್ದರು.
ಆದ್ರೆ ಸಾವಿನ ರಹದಾರಿಯಾಗಿ ಮಾರ್ಪಟ್ಟ ಹು-ಧಾ ಬೈಪಾಸ್‌ನ ಮೆಹಬೂಬ್ ದಾಬಾ ಬಳಿಯಲ್ಲಿ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಬೈಕ್‌ಗಳೆರಡು ಡಿಕ್ಕಿ ಹೊಡೆದ ಪರಿಣಾಮ ಸೆಟ್ಲಿಮೆಂಟ್‌ನ ಸುನೀಲ, ವಿನೋದ ಹಾಗೂ ಮಂಜುನಾಥ ಎಂಬುವರು ದಾರುಣವಾಗಿ ಮೃತಪಟ್ಟಿದ್ದು ಇನ್ನೊಬ್ಬ ಸಾವು ಬದುಕಿನ ನಡುವೆ ಕಿಮ್ಸ್ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾನೆ.
ಆದ್ರೆ ಇದೆಲ್ಲದರ ನಡುವೆ ಕೇವಲ 24 ಗಂಟೆಯ ಅವಧಿಯಲ್ಲಿ ಮತ್ತೆ ನಾಲ್ಕು ಜೀವಗಳನ್ನು ಬಲಿ ಪಡೆದಿರೋ ಈ ಕಿಲ್ಲರ್ ಬೈಪಾಸ್, ಅಭಿವೃದ್ಧಿ ಮಾಡ್ತೀವಿ ಎಂದು ಮಾಧ್ಯಮದ ಮುಂದೆ ಬೊಬ್ಬಿರಿಯುವ ನಮ್ಮ ಜನಪ್ರತಿನಿಧಿಗಳು ಕೇವಲ ಮಾತನ್ನು ಬಿಟ್ಟು ಅಭಿವೃದ್ಧಿ ಕೆಲಸವನ್ನು ಯಾವಾಗ ಮಾಡುತ್ತಾರೆ ಎಂಬ ಪ್ರಶ್ನೆ ಕೇವಲ ಪ್ರಶ್ನೆಯಾಗಿಯೇ ಉಳಿದಿದೆ.
ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/08/2022 12:09 pm