ಹುಬ್ಬಳ್ಳಿ: ಸರ್ಕಾರದ ನಿಯಮದ ಪ್ರಕಾರ ಕಾರಿನಲ್ಲಿ ಡ್ರೈವರ್ ಜೊತೆ ನಾಲ್ಕು ಜನ ಕೂಡಬಹುದು. ಅಬ್ಬಬ್ಬಾ ಅಂದ್ರೆ ಮತ್ತೊಬ್ಬರನ್ನು ತೊಡೆ ಮೇಲೆ ಕೂಡಿಸಿಕೊಳ್ಳಬಹುದು. ಅದಕ್ಕಿಂತಲೂ ಸಂಖ್ಯೆ ಜಾಸ್ತಿ ಆಯಿತಂದ್ರೆ…? ಅದಕ್ಕೂ ಒಂದು ಉಪಾಯ ಇದೆ. ಅದೇ ಕಾರಿನ ಹಿಂಬದಿಯಲ್ಲಿರೋ ಡಿಕ್ಕಿ ಒಳಗೆ ಕುಳಿತುಕೊಳ್ಳುವುದು. ಹೀಗೆ ಕುಳಿತು ಪಯಣಿಸಿದ ವೀಡಿಯೋ ಸಾಕಷ್ಟು ವೈರಲ್ ಆಗಿದೆ.
ಹೌದು... ಹೀಗೂ ತಲೆ ಓಡಿಸುವವರಿದ್ದಾರೆ. ಹುಬ್ಬಳ್ಳಿಯಲ್ಲಿ ಜನನಿಬಿಡ ರಸ್ತೆಯಲ್ಲಿಯೇ ಕಾರಿನಲ್ಲಿ ಇಂಥದ್ದೊಂದು ಪ್ರಯಾಣ ನೋಡಿ ಜನ ಹುಬ್ಬೇರಿಸಿದ್ದಾರೆ. ಎಲ್ಲಿಂದಲೋ ಬಂದ ಈ ಕಾರು ನಗರದ ಹೃದಯ ಭಾಗ ಚನ್ನಮ್ಮ ವೃತ್ತದಿಂದ ಗೋಪನಕೊಪ್ಪದ ಕಡೆ ಪ್ರಯಾಣ ಮಾಡಿದೆ.
ಕಾರಿನ ಡಿಕ್ಕಿಯಲ್ಲಿ ವ್ಯಕ್ತಿಯೋರ್ವ ಅಡ್ಡಲಾಗಿ ಮಲಗಿದ್ದಾನೆ. ಕೆಲವರು ಶವ ಏನಾದರೂ ಡಿಕ್ಕಿಯಲ್ಲಿ ಇಟ್ಟುಕೊಂಡು ಹೋಗ್ತಿದಾರಾ ಅಂತ ಅನುಮಾನಾನೂ ವ್ಯಕ್ತಪಡಿಸಿದ್ದಾರೆ. ಆದರೆ, ಡಿಕ್ಕಿಯಲ್ಲಿದ್ದ ವ್ಯಕ್ತಿ ಅಲುಗಾಟ ನಡೆಸಿದ್ದರಿಂದ ಜೀವಂತವಾಗಿರೋದು ಖಾತ್ರಿಯಾಗಿದೆ.
ಆದರೆ, ಡಿಕ್ಕಿಯಲ್ಲಿ ಕುಳಿತು ಇಷ್ಟು ರಿಸ್ಕ್ ತಗೊಂಡು ಪ್ರಯಾಣ ಮಾಡೋದು ಎಷ್ಟು ಸರಿ ಅಂತ ಜನತೆ ಪ್ರಶ್ನಿಸಿದೆ. ಅದರಲ್ಲಿಯೂ ಹುಬ್ಬಳ್ಳಿಯ ಬಹುತೇಕ ರಸ್ತೆಗಳು ಗುಂಡಿಗಳಿಂದ ತುಂಬಿವೆ. ಹೀಗಿರುವಾಗ ಅಪ್ಪಿತಪ್ಪಿ ಗುಂಡಿಯಲ್ಲಿ ಏನಾದರೂ ಬಿದ್ದಿದ್ದರೆ ಯಮನ ಪಾದವೇ ಗತಿ ಅನ್ನುವಂತಾಗುತ್ತಿತ್ತು. ಅಚ್ಚರಿ ಅಂದ್ರೆ ಪೊಲೀಸರ ಮುಂದೆಯೇ ಈ ಕಾರು ಹಾದು ಹೋದರೂ ಅವರು ಈ ಬಗ್ಗೆ ತಲೆಕೆಡಿಸಿ ಕೊಂಡೇ ಇಲ್ಲ!
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/07/2022 01:26 pm