ಹುಬ್ಬಳ್ಳಿ: ಆತ ಪಕ್ಕಾ ಬಿಜೆಪಿ ಕಾರ್ಯಕರ್ತ. ಸಣ್ಣ ವಯಸ್ಸಿನಲ್ಲಿ ಜನರ ಮೆಚ್ಚುಗೆ ಪಡೆದು ಗ್ರಾಮ ಪಂಚಾಯತಿ ಸದಸ್ಯ ಸಹ ಆಗಿದ್ದ. ಜೊತೆಗೆ ತಾನು ಇಷ್ಟ ಪಟ್ಟ ಹುಡುಗಿಯನ್ನು ಮದುವೆಯಾಗಿ ಸುಖ ಜೀವನ ನಡೆಸುತ್ತಿದ್ದ. ಆದರೆ ಆ ಸಂತಸವೇ ಈತನಿಗೆ ಮುಳ್ಳಾಗಿ ಪ್ರಾಣ ತೆಗೆದುಕೊಂಡಿದೆ. ಇನ್ನು ನ್ಯಾಯ ನೀಡಬೇಕಾದವರೇ ಆರೋಪಿಗಳಿಗೆ ರಕ್ಷಣೆ ನೀಡ್ತಿದ್ದಾರೆ ಎನ್ನಲಾಗಿದೆ. ಕೊಲೆಯಾದ ವ್ಯಕ್ತಿಯ ಕುಟುಂಬ ನಿತ್ಯ ಕಣ್ಣೀರು ಹಾಕುವಂತಾಗಿದೆ..
ಇದೇ ಜುಲೈ 4 ರಂದು ಗಂಗಿವಾಳ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯ ದೀಪಕ ಪಟದಾರಿ ಬರ್ಬರವಾಗಿ ಕೊಲೆಯಾಗಿದ್ದ. ನಾಲ್ಕು ವರ್ಷಗಳ ಹಿಂದೆ ರಾಯನಾಳ ಗ್ರಾಮದ ಮೇಟಿ ಕುಟುಂಬದ ಮಗಳು ಪುಷ್ಪಾಳನ್ನು ಪ್ರೀತಿಸಿ ತೀವ್ರ ವಿರೋಧದ ನಡುವೆಯೂ ಮದುವೆಯಾಗಿದ್ದ. ಇದೇ ಕಾರಣಕ್ಕೆ ದೀಪಕ್‌ನನ್ನು ಪುಷ್ಪಾಳ ತವರು ಮನೆಯವರು ನಡು ಗ್ರಾಮದಲ್ಲಿ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಬಗ್ಗೆ ಪುಷ್ಪ ದೂರು ದಾಖಲಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕೊಲೆ ಮಾಡಿದವರು ಆರಾಮಾಗಿ ಹೊರಗಡೆ ಓಡಾಡುತ್ತಿದ್ದಾರೆಂದು ನೇರವಾಗಿ ಆರೋಪ ಮಾಡುತ್ತಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ಇಲ್ಲಿಯವರೆಗೆ ಕೇವಲ 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು 3 ಜನ ಮಖ್ಯ ಆರೋಪಿಗಳಾದ ಯಲ್ಲಪ್ಪ ಶಂಕ್ರಪ್ಪ ಮೇಟಿ, ರುದ್ರಪ್ಪ ಶಂಕ್ರಪ್ಪ ಮೇಟಿ, ನಾಗರಾಜ ಮಲ್ಲಪ್ಪ ಹೆಗ್ಗಣ್ಣವರ ಇವರನ್ನು ಬಂಧಿಸಿಲ್ಲ ಎಂದು ಮೃತ ದೀಪಕ್ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಇದೀಗ ಪುಷ್ಪಾ ಹಾಗೂ ದೀಪಕ್‌ನ ಉಳಿದ ಕುಟುಂಬ ಸದಸ್ಯರಿಗೂ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಪೊಲೀಸ್ ಕಮಿಷನರ್‌ಗೆ ದೂರ ನೀಡಿದ್ರೂ ಪೊಲೀಸರು ಪುಷ್ಪ ಕುಟುಂಬಕ್ಕೆ ರಕ್ಷಣೆ ನೀಡದೆ ನಿರ್ಲಕ್ಷ್ಯ ತೋರಿದ್ದಾರೆಂಬ ಆರೋಪ ಸಹ ಕೇಳಿ ಬಂದಿದೆ. ಕೂಡಲೇ ಪೊಲೀಸ್ ಕಮೀಷನರ್ ಸೂಕ್ತವಾಗಿ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕಾಗಿದೆ.
Kshetra Samachara
09/07/2022 08:51 pm