ಧಾರವಾಡ: ಪ್ರಾಧ್ಯಾಪಕನೋರ್ವ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ ಕಳುಹಿಸಿ ಇದೀಗ ತನ್ನ ಪ್ರಾಧ್ಯಾಪಕ ಹುದ್ದೆಗೆ ಸಂಚಕಾರ ತಂದುಕೊಂಡಿರುವ ಘಟನೆ ವಿದ್ಯಾಕಾಶಿ ಧಾರವಾಡದಲ್ಲಿ ನಡೆದಿದೆ.
ಗುರುವಿಗೆ ನಮ್ಮ ದೇಶದಲ್ಲಿ ಅತ್ಯುನ್ನತ ಸ್ಥಾನವಿದೆ. ಆ ಗುರು ಸ್ಥಾನಕ್ಕೆ ಕಳಂಕ ತರುವಂತಹ ಕೆಲಸವನ್ನು ಧಾರವಾಡದ ಈ ಪ್ರಾಧ್ಯಾಪಕ ಮಾಡಿದ್ದಾನೆ. ಇದೇ ಮೊದಲ ಬಾರಿಗೆ ಈತ ಈ ರೀತಿ ಮಾಡಿಲ್ಲ. ಈ ಹಿಂದೆಯೂ ಇದೇ ರೀತಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ. ಇದೀಗ ಮತ್ತೊಬ್ಬ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ ಕಳುಹಿಸಿ ತನ್ನ ಪ್ರಾಧ್ಯಾಪಕ ಹುದ್ದೆಗೆ ಸಂಚಕಾರ ತಂದುಕೊಂಡಿದ್ದಾನೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಗೆ ಬರುವ ಸರ್. ಸಿದ್ದಪ್ಪ ಕಂಬಳಿ ಕಾನೂನು ಕಾಲೇಜಿನ ಪ್ರಾಧ್ಯಾಪಕ ಪ್ರೊ.ಶೇಷಗಿರಿ ಎಂಬ ಪ್ರಾಧ್ಯಾಪಕನೇ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ ಕಳುಹಿಸಿದವನು. ಪ್ರಾರಂಭದಲ್ಲಿ ಆ ವಿದ್ಯಾರ್ಥಿನಿಗೆ ಸಹಜವಾಗಿಯೇ ಸಂದೇಶ ಕಳುಹಿಸುತ್ತಿದ್ದ ಈ ಪ್ರಾಧ್ಯಾಪಕ, ನಂತರ ಆಕೆಗೆ ಅಶ್ಲೀಲ ಸಂದೇಶ ಕಳುಹಿಸಲು ಪ್ರಾರಂಭಿಸಿದ್ದಾನೆ. ಇದರಿಂದ ಗಾಬರಿಯಾದ ಆ ವಿದ್ಯಾರ್ಥಿನಿ, ಆ ಪ್ರಾಧ್ಯಾಪಕ ಮಾಡಿದ ಎಲ್ಲ ಸಂದೇಶಗಳನ್ನು ಸ್ಕ್ರೀನ್ ಶಾಟ್ ಹೊಡೆದುಕೊಂಡು ಪ್ರಿಂಟ್ ತೆಗೆಯಿಸಿ ದಾಖಲೆ ಸಮೇತ ಪ್ರಾಚಾರ್ಯರಿಗೆ ದೂರು ಕೊಟ್ಟಿದ್ದಾಳೆ. ಈ ವಿಷಯ ಯಾರಿಗೂ ಗೊತ್ತಾಗಬಾರದು ಎಂದು ಒಂದು ವಾರದಿಂದ ಗೌಪ್ಯವಾಗಿ ಇಡಲಾಗಿತ್ತು.
ಪ್ರೊ. ಶೇಷಗಿರಿ ಅವರ ಮೇಲೆ ಈ ರೀತಿ ದೂರು ಕೇಳಿ ಬಂದ ನಂತರ ಕಾಲೇಜಿನ ಪ್ರಾಚಾರ್ಯರು ಆತನಿಂದ ತಪ್ಪೊಪ್ಪಿಗೆ ಪತ್ರ ಬರೆಯಿಸಿಕೊಂಡಿದ್ದಾರೆ. ಅಲ್ಲದೇ ಆತನಿಂದ ರಾಜೀನಾಮೆಯನ್ನೂ ಪಡೆದಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/07/2022 10:45 am