ಹುಬ್ಬಳ್ಳಿ: ಹೀಗೆ ಫೋಟೋದಲ್ಲಿ ಕಾಣ್ತಾಯಿರೋ ಈ ವ್ಯಕ್ತಿಯ ಹೆಸರು ಇಸ್ಮಾಯಿಲ್ ಸಾಬ್ ಕಿಲ್ಲೇದಾರ್. ನವನಗರದ ಕೆಸಿಸಿ ಬ್ಯಾಂಕ್ ಕಾಲೋನಿಯ ನಿವಾಸಿಯಾಗಿದ್ ಇಸ್ಮಾಯಿಲ್ ಸಾಬ್ ಕಳೆದ ಹಲವು ವರ್ಷಗಳಿಂದ ಕೆಎಸ್‌ಆರ್‌ಪಿ ಯಲ್ಲಿ ಡಿ ಗ್ರೂಪ್ ನೌಕರನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನೇನು ನಾಲ್ಕೈದು ವರ್ಷಗಳಲ್ಲಿ ನಿವೃತ್ತಿ ಹೊಂದಿ ವಿಶ್ರಾಂತಿ ಜೀವನ ಕಳೆಯಬಯಸಿದ್ದ. ಈಗ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾನು ಹೆತ್ತ ಮಕ್ಕಳಿಂದಲೇ ಕೊಲೆಗೀಡಾಗಿದ್ದಾರೆ.
ಹೌದು ಮೊದಲನೇ ಪತ್ನಿ ತೀರಿಹೋದ ಬಳಿಕ ಇಸ್ಮಾಯಿಲ್ ಸಾಬ್ ಎರಡನೇ ಮದುವೆಯಾಗಿದ್ದರು. ಮೊದಲನೇ ಪತ್ನಿಯ ಇಬ್ಬರು ಮಕ್ಕಳು ಹಾಗೂ ಇಸ್ಮಾಯಿಲ್ ಸಾಬ್‌ನ ಎರಡನೇ ಪತ್ನಿ ನಡುವೆ ಕೆಲ ಕ್ಷುಲ್ಲಕ ಕಾರಣಗಳಿಂದ ಆಗಾಗ ಜಗಳ ನಡೆಯುತ್ತಲೇ ಇತ್ತು. ಕಳೆದ ಹಲವು ವರ್ಷಗಳಿಂದ ಮಲತಾಯಿ ತಮ್ಮನ್ನ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆಕ್ರೋಶಗೊಂಡ ಪುತ್ರಿ ದಾವಲ್ ಮುನ್ನಿ ಹಾಗೂ ಪುತ್ರ ಫಕ್ರುಸಾಬ್ ಆ ಇಬ್ಬರು ಮಕ್ಕಳು ಆಸ್ತಿ ವಿಚಾರಕ್ಕಾಗಿ ಮಲತಾಯಿಯ ಮೇಲಿನ ಸಿಟ್ಟಿನಿಂದಾಗಿ ತಂದೆಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.
ತಾಯಿ ತೀರಿಹೋದ ಬಳಿಕ ತಂದೆ ಎರಡನೇ ಮದುವೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಇಸ್ಮಾಯಿಲ್ ಸಾಬ್‌ನ ಆ ಇಬ್ಬರು ಮಕ್ಕಳು ಫಕ್ರುಸಾಬ್ ಹಾಗೂ ದಾವಲ್ ಮುನ್ನಿ ತಂದೆಯೊಂದಿಗೆ ಆಗಾಗ ಜಗಳ ಮಾಡುತ್ತಲೇ ಇದ್ರಂತೆ. ಇನ್ನು ಪ್ರಮುಖವಾಗಿ ತಂದೆ ಮದುವೆಯಾದಾಗಿನಿಂದಲೂ ಎರಡನೇ ತಾಯಿ ಈ ಇಬ್ಬರು ಮಕ್ಕಳ ಮೇಲೆ ಮಲತಾಯಿ ಧೋರಣೆ ತೋರುತ್ತಿದ್ಲಂತೆ. ಅಲ್ಲದೇ ಆಸ್ತಿ ವಿಚಾರವಾಗಿಯೂ ತಂದೆ ಹಾಗೂ ಮಕ್ಕಳಲ್ಲಿ ನಡೆಯುತ್ತಿದ್ದ ಕಲಹ ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ. ಕಳೆದ ಒಂದು ವರ್ಷದಿಂದ ತಂದೆಯ ಕೊಲೆಗೆ ಸ್ಕೆಚ್ ಹಾಕಿ ಕುಳಿತಿದ್ದ ಅಕ್ಕ ದಾವಲ್ ಮುನ್ನಿ ಹಾಗೂ ಫಕ್ರುಸಾಬ್ ಮೊನ್ನೆ ರಾತ್ರಿ ವೇಳೆ ಯಾವುದೋ ಕೆಲಸದ ನೆಪಹೇಳಿ ತಂದೆಯನ್ನು ಹೊರಗಡೆ ಕರೆದುಕೊಂಡು ಬಂದಿದ್ದಾರೆ. ಆಟೋದಲ್ಲಿ ಕರೆತಂದ ಮಕ್ಕಳು ತಮ್ಮ ಸ್ನೇಹಿತರಾದ ದರ್ಶನ್ ಆರಿಕಟ್ಟಿ, ಶಿವು ಆರಿಕಟ್ಟಿ, ಈಶ್ವರ್ ಆರಿಕಟ್ಟಿ, ರೋಹನ್ ಸೇರಿದಂತೆ ಹಲವರು ಇಸ್ಮಾಯಿಲ್ ಸಾಬ್‌ನ ಕತ್ತು ಹಿಸುಕಿ ಕೊಲೆಗೈದಿದ್ದಾರೆ.
ಒಟ್ಟಿನಲ್ಲಿ ಕೌಟುಂಬಿಕ ಕಲಹವನ್ನು ಕುಳಿತು ಬಗೆಹರಿಸಿಕೊಳ್ಳಬೇಕಿದ್ದ ಪಾಪಿಮಕ್ಕಳು ಕ್ಷುಲ್ಲಕ ಕಾರಣಕ್ಕಾಗಿ ತಂದೆಯನ್ನೇ ಕೊಲೆ ಮಾಡುವ ಹಂತಕ್ಕೆ ತಲುಪಿದ್ದು ನಿಜಕ್ಕೂ ದುರಾದೃಷ್ಟಕರ. ಪೊಲೀಸ್ ಇಲಾಖೆ ಇನ್ನಾದ್ರೂ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸಿ ಹದಗೆಟ್ಟ ಅವಳಿ ನಗರದ ಕಾನೂನು ಸುವ್ಯವಸ್ಥೆ ಸರಿಪಡಿಸಬೇಕಿದೆ.
ಮಲ್ಲೇಶ್ ಸೂರಣಗಿ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/07/2022 03:41 pm