ಧಾರವಾಡ: ಧಾರವಾಡದಲ್ಲಿ ಕಳೆದ ತಿಂಗಳು ನಡೆದ ದಲಿತ ವ್ಯಕ್ತಿಯೊಬ್ಬನ ಸಾವಿನ ಪ್ರಕರಣ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ದಲಿತ ವ್ಯಕ್ತಿಯನ್ನು ಕರೆದೊಯ್ದು ಕೊಲೆ ಮಾಡಲಾಗಿದೆ ಅಂತಾ ದೂರು ಸಹ ನೀಡಲಾಗಿತ್ತು. ಈ ಕೊಲೆಗೆ ಸಂಬಂಧಿಸಿದಂತೆ ಇದೀಗ ಪೊಲೀಸರು ಕೆಲ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಚಿತ್ರದಲ್ಲಿ ಕಾಣುತ್ತಿರುವ ವ್ಯಕ್ತಿಯ ಹೆಸರು ರಾಮಪ್ಪ ಕೆಳಗಡೆ. ವಯಸ್ಸು 46. ಧಾರವಾಡ ತಾಲೂಕಿನ ಹಂಗರಕಿ ಗ್ರಾಮದ ರಾಮಪ್ಪ ಹಲವಾರು ವರ್ಷಗಳಿಂದ ಅದೇ ಗ್ರಾಮದ ಹನುಮಂತಪ್ಪ ಜುಮ್ಮಣ್ಣವರ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಬೇಕಾದಾಗ ಹನುಮಂತಪ್ಪ ರಾಮಪ್ಪನಿಗೆ ಹಣವನ್ನೂ ಕೊಡುತ್ತಿದ್ದ. ಹೀಗೆ ಸಾಲ ಕೊಡುತ್ತಾ ಕೊಡುತ್ತಾ ಅದು ಲಕ್ಷ ರೂ. ದಾಟಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಹನುಮಂತಪ್ಪ ನಿಧಾನವಾಗಿ ಆತನ ಪತ್ನಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ ಎಂಬ ಆರೋಪವೂ ಇದೆ.
ಹನುಮಂತಪ್ಪ ಮೇ 16 ರಂದು ಮನೆಗೆ ಬಂದು ರಾಮಪ್ಪನನ್ನು ಕೆಲಸಕ್ಕೆಂದು ಕರೆದೊಯ್ದಿದ್ದ. ಆದರೆ, ಸಂಜೆ ಹೊತ್ತಿಗೆ ರಾಮಪ್ಪ ಸಿಕ್ಕಿದ್ದು ಶವವಾಗಿ. ಇನ್ನು ಶವವನ್ನು ನೋಡಿದವರಿಗೆ ಅನುಮಾನವೂ ಕಾಡಿತ್ತು. ಏಕೆಂದರೆ ಶವದ ಕೈ ಮುರಿದಿದ್ದು, ದೇಹದ ಅಲ್ಲಲ್ಲಿ ಗಾಯಗಳು ಕಂಡು ಬಂದಿದ್ದೇ ಈ ಅನುಮಾನಕ್ಕೆ ಕಾರಣವಾಗಿತ್ತು. ಆದರೆ, ಇದ್ಯಾವುದನ್ನೂ ಲೆಕ್ಕಿಸದೇ ಹನುಮಂತಪ್ಪ, ರಾಮಪ್ಪನ ಪತ್ನಿ ಕಸ್ತೂರಿ ಹಾಗೂ ಕೆಲವರು ಸೇರಿ ಶವವನ್ನು ಸುಟ್ಟು ಹಾಕಿದ್ದರು. ಅಷ್ಟೇ ಅಲ್ಲ, ಬಳಿಕ ಬೂದಿಯನ್ನು ಕೂಡ ಬಿಡದೇ ಕೆರೆಗೆ ಹಾಕಿ ಬಂದಿದ್ದರು.
ಇದರಿಂದ ಅನುಮಾನಗೊಂಡ ಕಸ್ತೂರಿಯ ತಮ್ಮ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಮೇ 18 ರಂದು ಎಫ್ಐಆರ್ ದಾಖಲಾಗಿತ್ತು. ಈ ದೂರಿನ ಆಧಾರದ ಮೇಲೆ ಇದೀಗ ಮೂವರು ಆರೋಪಿಗಳನ್ನು ಗರಗ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದಲಿತರು ಸಾಮಾನ್ಯವಾಗಿ ಶವವನ್ನು ಹೂಳಿ, ಅಂತ್ಯಸಂಸ್ಕಾರ ಮಾಡುತ್ತಾರೆ. ಆದರೆ, ಈ ಪ್ರಕರಣದಲ್ಲಿ ರಾಮಪ್ಪನ ಶವವನ್ನು ಸುಟ್ಟಿದ್ದೇಕೆ ಅನ್ನೋ ಪ್ರಶ್ನೆ ಕೇಳಿ ಬಂದಿತ್ತು. ಸಾಮಾನ್ಯವಾಗಿ ದಲಿತರ ಮೇಲೆ ಹಲ್ಲೆ, ಹತ್ಯೆ ನಡೆದಾಗ ಪೊಲೀಸರು ಆದಷ್ಟು ಬೇಗ ಆರೋಪಿಗಳನ್ನು ಬಂಧಿಸೋ ಪ್ರಯತ್ನದಲ್ಲಿರುತ್ತಾರೆ.
ಆದರೆ, ಈ ಪ್ರಕರಣದಲ್ಲಿ ದಲಿತ ವ್ಯಕ್ತಿ ನಿಗೂಢವಾಗಿ ಮೃತಪಟ್ಟಿದ್ದು, ಬಳಿಕ ಆತನ ಶವವನ್ನು ಸುಟ್ಟು ಹಾಕಿದ್ದು ತಿಳಿದು ಬಂದರೂ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡುತ್ತಿಲ್ಲ. ಅಲ್ಲದೆ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಈ ಎಲ್ಲ ಆರೋಪಗಳಿಗೆ ಪೊಲೀಸರು ತೆರೆ ಎಳೆದಿದ್ದು, ಈ ಕೊಲೆಗೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಿ, ಇನ್ನೂ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
Kshetra Samachara
15/06/2022 07:34 pm