ಹುಬ್ಬಳ್ಳಿ: ಶೀಲ ಶಂಕಿಸಿ 2019ರಲ್ಲಿ ಹೆಂಡತಿಯನ್ನು ಕೊಲೆಗೈದಿದ್ದ ಅಪರಾಧಿ ಪತಿಗೆ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50,000 ರೂ. ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ.
ಗದಗ ರಸ್ತೆ ಚಾಲುಕ್ಯ ನಗರದ ನಿವಾಸಿ ಕಿಶೋರ ಬೊಮ್ಮಾಜಿ ಶಿಕ್ಷೆಗೀಡಾದ ಅಪರಾಧಿ. ಕಿಶೋರ 2011ರಲ್ಲಿ ಆಂಧ್ರಪ್ರದೇಶ ಗುಂಟೂರು ಮೂಲದ ಲವೀನಾರನ್ನು ವಿವಾಹವಾಗಿದ್ದರು. ದಂಪತಿಗೆ ಒಂದು ಹೆಣ್ಣು ಮಗು ಜನಿಸಿತ್ತು. ಹೆಂಡತಿ ಶೀಲ ಶಂಕಿಸಿ ಕಿಶೋರ ಜಗಳವಾಡುತ್ತಿದ್ದ. ತಂದೆ- ತಾಯಿ ಜತೆ ಮಾತನಾಡಲೆಂದು ಪರಿಚಯಸ್ಥರೊಬ್ಬರಿಂದ ಲವೀನಾ ಮೊಬೈಲ್ ಫೋನ್ ಪಡೆದಿದ್ದಳು. ಇದರಿಂದ ಮತ್ತಷ್ಟು ಸಂಶಯಪಟ್ಟು ಜಗಳ ತೆಗೆದಿದ್ದ. 2018ರ ಮಾ.23ರಂದು ಕುತ್ತಿಗೆಗೆ ವೈರ್‌ನಿಂದ ಬಿಗಿದು ಕೊಲೆ ಮಾಡಿದ್ದ. ನಂತರ ಆಕೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂಬಂತೆ ಬಿಂಬಿಸಲು ಯತ್ನಿಸಿದ್ದ.
ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಇನ್‌ಸ್ಪೆಕ್ಟರ್ ಬಿ.ಆರ್. ಗಡ್ಡೇಕರ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ದೇವೇಂದ್ರಪ್ಪ ಬಿರಾದಾರ ಅವರು ಅಪರಾಧಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. 40,000 ರೂ.ಗಳನ್ನು ಮೃತಳ ಮಗಳಿಗೆ ಪರಿಹಾರ ನೀಡಲು ಸೂಚಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ಗಿರಿಜಾ ತಮ್ಮಿನಾಳ ವಾದ ಮಂಡಿಸಿದ್ದರು.
Kshetra Samachara
31/03/2022 09:30 am