ಧಾರವಾಡ: ಮೈಸೂರು ಜೈಲಿನಲ್ಲಿದ್ದುಕೊಂಡು ಧಾರವಾಡದ ಕೆಲ ಉದ್ಯಮಿಗಳಿಗೆ ಬೆದರಿಕೆ ಹಾಕುತ್ತಿದ್ದಾನೆ ಎಂಬ ಆರೋಪದ ಮೇಲೆ ಧಾರವಾಡದ ಉಪನಗರ ಠಾಣೆ ಪೊಲೀಸರ ವಶದಲ್ಲಿರುವ ಭೂಗತ ಪಾತಕಿ ಬಚ್ಛಾಖಾನ್ ನನ್ನು ಧಾರವಾಡದ ಜಿಲ್ಲಾ ನ್ಯಾಯಾಲಯ ಜ.31ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ನಿನ್ನೆ ರಾತ್ರಿ ಬಚ್ಛಾಖಾನ್ ನನ್ನು ಮೈಸೂರು ಜೈಲಿನಿಂದ ಬಾಡಿ ವಾರಂಟ್ ಮೇಲೆ ಉಪನಗರ ಠಾಣೆ ಪೊಲೀಸರು ಧಾರವಾಡಕ್ಕೆ ಕರೆ ತಂದಿದ್ದರು.
ಇಂದು ಭದ್ರತೆ ಮಧ್ಯೆ ಆತನನ್ನು ಧಾರವಾಡದ ಜಿಲ್ಲಾ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. ಬಚ್ಛಾಖಾನ್ ನನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಜ.31 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿತು.
ನ್ಯಾಯಾಲಯದ ಹೊರಗಡೆ ಪ್ರತಿಕ್ರಿಯೆ ನೀಡಿದ ಬಚ್ಛಾಖಾನ್ ಪರ ವಕೀಲ ಶಿರಾಜುದ್ದೀನ್, ಮೈಸೂರು ಜೈಲಿನಲ್ಲಿ ರೇಡ್ ಆದಾಗ 60 ಮೊಬೈಲ್ ಗಳು ಸಿಕ್ಕಿದ್ದವು.
ಇದರಲ್ಲಿ ಬಚ್ಛಾಖಾನ್ ಒಬ್ಬರನ್ನೇ ಆರೋಪಿಯನ್ನಾಗಿ ಮಾಡಲಾಗಿದೆ. ಜೈಲಿನೊಳಗೆ ಮೊಬೈಲ್ ಗಳು ಹೇಗೆ ಬಂದವು ಎಂಬುದರ ಕುರಿತು ನಾನು ಮಾಹಿತಿ ನೀಡುತ್ತೇನೆ ಎಂದು ಬಚ್ಛಾಖಾನ್ ಅವರು ತಿಳಿಸಿದ್ದಾರೆ.
ಸದ್ಯ ಜ.31ರ ವರೆಗೆ ಪೊಲೀಸ್ ಕಸ್ಟಡಿಗೆ ಅವರನ್ನು ಕೊಡಲಾಗಿದೆ. ಬಿಡುಗಡೆಯಾಗುವ ಸಂದರ್ಭದಲ್ಲಿ ಈ ರೀತಿಯ ಆರೋಪಗಳನ್ನು ಬಚ್ಛಾಖಾನ್ ಅವರ ಮೇಲೆ ಮಾಡಲಾಗುತ್ತಿದೆ ಎಂದು ಸ್ವತಃ ಬಚ್ಛಾಖಾನ್ ಅವರೇ ತಿಳಿಸಿದ್ದಾರೆ ಎಂದರು.
ಜ.31ರವರೆಗೆ ಬಚ್ಛಾಖಾನ್ ನನ್ನು ತಮ್ಮ ವಶಕ್ಕೆ ಪಡೆದಿರುವ ಪೊಲೀಸರು ಧಾರವಾಡದ ಉದ್ಯಮಿಗಳಿಗೆ ಬೆದರಿಕೆ ಹಾಕಿರುವ ಬಗ್ಗೆ ವಿಚಾರಣೆ ನಡೆಸಲಿದ್ದಾರೆ.
Kshetra Samachara
28/12/2020 02:50 pm