ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಮೀಷನ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಈ ದಂಧೆಯ ಬಗ್ಗೆ ಇಷ್ಟು ತಲೆ ಕೆಡಿಸಿಕೊಳ್ಳದೇ ಕುಳಿತಿದ್ದ ಪಾಲಿಕೆ ಈಗ ಎಚ್ಚೇತ್ತುಕೊಂಡಿದೆ. ಏಜೆನ್ಸಿಗಳು ಆಟಾಟೋಪಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಈಗ ಕಾರ್ಯಾಚರಣೆಗೆ ಶಾಸಕರು ಕೂಡ ಕೈ ಜೋಡಿಸಿದ್ದಾರೆ.
ಹೌದು..ಅವಳಿನಗರದ ಸ್ವಚ್ಚತೆಯ ಹಿನ್ನೆಲೆ 193 ಆಟೋ ಟಿಪ್ಪರ್ ಕಾರ್ಯನಿರ್ವಹಿಸುತ್ತಿದ್ದು, ಈ ಆಟೋ ಟಿಪ್ಪರ್ ಚಾಲಕರು ತಮ್ಮ ವೇತನ ಪಡೆಯಲು ಪ್ರತಿ ತಿಂಗಳು ಮೂರು ಸಾವಿರ ಕಮಿಷನ್ ಕೊಡಬೇಕಿದೆ. ಇನ್ನೂ ವೇತನದಲ್ಲಿ ಕೂಡ ಬಹುದೊಡ್ಡ ಹಗರಣವೇ ನಡೆದಿದ್ದು, ಚಾಲಕರಿಗೆ 22,505 ಬರಬೇಕಿರುವ ವೇತನ ಆದರೆ ಅವರಿಗೆ ಬರುವುದು ಕೇವಲ 14 ಸಾವಿರ ಅದರಲ್ಲೂ ಕೂಡ 3000 ಕಮೀಷನ್ ಮೊದಲೇ ಕಟ್ ಆಗುತ್ತಿದೆ.
ಇದರಿಂದ ಚಾಲಕರು ಕಮೀಷನ್ ಕರಾಳ ದಂಧೆಗೆ ಬೇಸತ್ತಿದ್ದಾರೆ. ಈ ಬಗ್ಗೆ ಆಟೋ ಟಿಪ್ಪರ್ ಚಾಲಕರು ಪಾಲಿಕೆ ಆಯುಕ್ತರ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಅವರ ಮುಂದೆ ಕಣ್ಣೀರು ಹಾಕಿದ್ದಾರೆ. ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ಆಯುಕ್ತರು ನೀಡಿದ್ದಾರೆ.
ಪಾಲಿಕೆಯಲ್ಲಿ ಏಜೆನ್ಸಿಗಳ ದಬ್ಬಾಳಿಕೆ ಹೆಚ್ಚಾಗಿದ್ದು,55 ಏಜೆನ್ಸಿಗಳು ಕರ್ತವ್ಯ ನಿರ್ವಹಿಸುತ್ತಿವೆ. ಏಜೆನ್ಸಿಗಳು ನೌಕರರಿಗೆ ಪೂರ್ಣ ಪ್ರಮಾಣದ ವೇತನ ನೀಡುವುದಿಲ್ಲ.18,000 ರೂ ವೇತನ, 14,000 ಕೈಗೆ ಸಿಗುವ ವೇತನ. ಇದರಲ್ಲಿ ಏಜೆನ್ಸಿಗಳು 3,000 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಯಾವ ಮಿನಿಸ್ಟರ್, ಎಂಎಲ್ ಎ ಹಾಗೂ ಸಿಎಂಗೆ ಕಂಪ್ಲೇಂಟ್ ಕೊಟ್ಟರೂ ಕೂಡ ನಾವು ಬಚಾವ್ ಆಗಿ ಬರ್ತೀವಿ ಎಂಬುವಂತ ಅಟ್ಟಹಾಸದ ಮಾತನ್ನು ಏಜೆನ್ಸಿಯವರು ಆಟೋ ಟಿಪ್ಪರ್ ಚಾಲಕರಿಗೆ ದಮ್ಕಿ ಹಾಕುತ್ತಿದ್ದು, ಈ ಕುರಿತು ಶಾಸಕರೇ ಕೆಂಡಾಮಂಡಲರಾಗಿ ವ್ಯವಸ್ಥೆ ಕುರಿತು ಅಸಮಾಧಾನ ಹೊರಹಾಕಿದ್ದಾರೆ.
ಒಟ್ಟಿನಲ್ಲಿ ಕಮೀಷನರ್ ಕಚೇರಿಯಲ್ಲಿಯೇ ಕಮೀಷನ್ ದಂಧೆ ತಲೆಯೆತ್ತಿದ್ದು, ಇಷ್ಟು ವರ್ಷವಾದರೂ ಕೂಡ ಈ ಕರಾಳ ದಂಧೆಗೆ ಬ್ರೇಕ್ ಇಲ್ಲವಾಗಿದ್ದು, ಇನ್ನಾದರೂ ಈ ಅವ್ಯವಸ್ಥೆಗೆ ಬ್ರೇಕ್ ಬಿಳಲಿದೆಯಾ ಕಾದುನೋಡಬೇಕಿದೆ.
Kshetra Samachara
09/08/2022 04:20 pm