ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕವಿವಿ ಮೌಲ್ಯಮಾಪನ ಕುಲಸಚಿವ ಸಿಐಡಿ ವಶಕ್ಕೆ: ಧಾರವಾಡದವರೆಗೂ ಹಬ್ಬಿತು ಅಕ್ರಮ ನೇಮಕಾತಿ ಜಾಡು

ಧಾರವಾಡ: ರಾಜ್ಯದಲ್ಲೀಗ ಅಕ್ರಮ ನೇಮಕಾತಿಗಳದ್ದೇ ಸದ್ದು. ಒಂದಾದ ಮೇಲೆ ಒಂದರಂತೆ ಅಕ್ರಮ ನೇಮಕಾತಿಗಳ ರಹಸ್ಯಗಳು ಹೊರ ಬರುತ್ತಲೇ ಇವೆ. ಪಿಎಸ್ಐ ನೇಮಕಾತಿ ಅಕ್ರಮದ ಬೆನ್ನಲ್ಲಿಯೇ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ಅಕ್ರಮವೂ ಈಗ ಬಯಲಿಗೆ ಬಂದಿದ್ದು, ಅದರ ಲಿಂಕ್ ಈಗ ಧಾರವಾಡಕ್ಕೂ ಬಂದು ತಲುಪಿಸಿದೆ.

ರಾಜ್ಯದಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮ ಬಯಲಿಗೆ ಬಂದ ನಂತರ ಅದರ ತನಿಖೆಗಿಳಿದ ಸಿಐಡಿ, ಆ ಅಕ್ರಮದ ಲಿಂಕ್ ಬೆಂಗಳೂರಿನಿಂದ ಕಲಬುರ್ಗಿವರೆಗೂ ಇರೋದನ್ನು ಪತ್ತೆ ಮಾಡಿತ್ತು. ಇದರಲ್ಲಿ ದೊಡ್ಡ ದೊಡ್ಡ ಕುಳಗಳು ಈಗಾಗಲೇ ಸಿಐಡಿ ಬಲೆಗೆ ಬಿದ್ದಿವೆ. ಇನ್ನು ಸಿಐಡಿ ಪ್ರಕರಣದ ಆಳಕ್ಕೆ ಇಳಿದು ತನಿಖೆ ಮಾಡುತ್ತಿರುವ ಹೊತ್ತಿನಲ್ಲಿಯೇ, ಈ ಹಿಂದೆ ನಡೆದಿದ್ದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿಯೂ ಅಕ್ರಮ ಆಗಿರುವುದು ಬಯಲಿಗೆ ಬಂದಿತ್ತು. ಇದರ ಜಾಡು ಹಿಡಿದು ಹೊರಟ ಸಿಐಡಿ ಅಧಿಕಾರಿಗಳು ಮೈಸೂರಿನಲ್ಲಿರುವ ಭೋಗೋಳಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಸೌಮ್ಯ ಎಂಬುವವರನ್ನು ಖೇಡ್ಡಾಗೆ ಕೆಡವಿದ್ದಾರೆ. ಬಂಧಿತ ಸೌಮ್ಯ ಸಿಐಡಿ ವಿಚಾರಣೆಯಲ್ಲಿ ನೀಡಿರುವ ಮಾಹಿತಿ ಅನುಸಾರ, ಈಗ ಇಡೀ ಪ್ರಕರಣ ವಿದ್ಯಾಕಾಶಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಬಂದು ತಗುಲಿದೆ. ಇಲ್ಲಿನ ಮೌಲ್ಯಮಾಪನ ಕುಲಸಚಿವ ಡಾ.ಎಚ್.ನಾಗರಾಜ್ ಅವರು ಈ ಹಿಂದೆ ಸಹಾಯಕ ಪ್ರಾಧ್ಯಾಪಕ ನೇಮಕಾತಿ ಪರೀಕ್ಷೆಯ ಭೋಗೋಳಶಾಸ್ತ್ರ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಅವರ ಶಿಷ್ಯೆಯಾಗಿದ್ದ ಸೌಮ್ಯ, ನಾಗರಾಜ್ ಮನೆಯಿಂದಲೇ ಪ್ರಶ್ನೆ ಪತ್ರಿಕೆಯನ್ನು ಲೀಕ್ ಮಾಡಿರೋದು ಬಹಿರಂಗ ಗೊಂಡಿದೆ. ಈ ಹಿನ್ನೆಲೆಯಲ್ಲಿ ಈಗ ನಾಗರಾಜ್ ಅವರನ್ನೂ ಸಹ ಸಿಐಡಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದೆ.

ಇನ್ನು ಸಹಾಯಕ ಪ್ರಾಧ್ಯಾಪಕ ನೇಮಕಾತಿಯಲ್ಲಿಯೂ ಅಕ್ರಮ ಆಗಿರುವ ಅಂಶ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮೈಸೂರಿನ ಸೌಮ್ಯಳಿಂದ ಅದು ಲಿಂಕ್ ಪಡೆದುಕೊಂಡು, ಈಗ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಬಂದು ನಿಂತಿದೆ. ಈ ಅಕ್ರಮದಲ್ಲಿ ಹೆಸರು ಕೇಳಿ ಬಂದಿರೋ ನಾಗರಾಜ್ ಅವರು ಈಗ ವಿಶ್ವವಿದ್ಯಾಲಯದಲ್ಲಿ ಮೌಲ್ಯಮಾಪನ ಕುಲಸಚಿವರೇ ಆಗಿದ್ದಾರೆ. ಇಲ್ಲಿಯೂ ಇವರಿಗೆ ಬರೋದು ಪರೀಕ್ಷಾ ವಿಭಾಗ. ಹೀಗಾಗಿ ಇಂಥವರ ಮೇಲೆ ನಂಬಿಕೆ ಇಟ್ಟು ಪರೀಕ್ಷೆಗಳ ಜವಾಬ್ದಾರಿ ವಹಿಸೋದು ಹೇಗೆ? ಅನ್ನೋ ಪ್ರಶ್ನೆಯೂ ಈಗ ಉದ್ಭವಿಸಿದೆ. ಸದ್ಯ ಸಭಾಪತಿ ಕೂಡಾ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ನಂಬಿಕೆ ದ್ರೋಹ ಆಗಿದ್ದರೆ ಕಠಿಣ ಕ್ರಮ ಆಗಬೇಕು ಎಂದಿದ್ದಾರೆ.

ಒಟ್ಟಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅಕ್ರಮ ನಡೆಯದೇ ಇದ್ದರೂ, ಬೇರೆ ಅಕ್ರಮದ ಜಾಡು ಈಗ ಕರ್ನಾಟಕ ವಿಶ್ವವಿದ್ಯಾಲಯಕ್ಕೂ ತಗಲು ಹಾಕಿಕೊಂಡಿದ್ದಂತೂ ಸುಳ್ಳಲ್ಲ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

27/04/2022 07:11 pm

Cinque Terre

130.54 K

Cinque Terre

5

ಸಂಬಂಧಿತ ಸುದ್ದಿ