ಧಾರವಾಡ: ಧಾರವಾಡ ಎಂ.ಬಿ ನಗರದ ನಿವಾಸಿಗಳಾದ ಪ್ರಮಥನಾಥ ಮತ್ತು ಶ್ರೀದೇವಿ ಪಾವಟೆ ಎಂಬ ದಂಪತಿ ತಾವು ಈ ಹಿಂದೆ ಅಕ್ಟೋಬರ್ 30, 2008 ರಂದು 10 ವರ್ಷದ ಅವಧಿಯ ಎಲ್‌ಐಸಿ ಹೆಲ್ತ್ ಪ್ಲಸ್ ಪಾಲಸಿ (ವೈದ್ಯಕೀಯ ವಿಮೆ) ಖರೀದಿಸಿದ್ದರು. ಶ್ರೀದೇವಿ ಅವರು ಅಕ್ಟೋಬರ್ 30, 2008ರಂದು ಎಸ್‌ಡಿಎಂ ಆಸ್ಪತ್ರೆಯಲ್ಲಿ ದಾಖಲಾಗಿ ಕಿಬ್ಬೊಟ್ಟೆಯ ಸಮಸ್ಯೆಗಾಗಿ 79,216 ರೂಪಾಯಿ ಭರಿಸಿ ಶಸ್ತ್ರ ಚಿಕಿತ್ಸೆ ಪಡೆದಿದ್ದು, ಆ ವೈದ್ಯಕೀಯ ವೆಚ್ಚವನ್ನು ತನಗೆ ಪಾವತಿಸುವಂತೆ ಎಲ್‌ಐಸಿ ಆಫ್ ಇಂಡಿಯಾಗೆ ತಮ್ಮ ಪಾಲಿಸಿ ಆಧಾರದಲ್ಲಿ ಕ್ಲೇಮ್ ಅರ್ಜಿ ಸಲ್ಲಿಸಿದ್ದರು.
ಆದರೆ, ಎಲ್ಐಸಿಯು ತಮ್ಮ ಕ್ಲೇಮ್‌ಅನ್ನು ಸೂಕ್ತ ಕಾರಣವಿಲ್ಲದೇ ತಿರಸ್ಕರಿಸಿ, ಸೇವಾ ನ್ಯೂನ್ಯತೆ ಎಸಗಿದೆ ಎಂದು ಅವರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಈಶಪ್ಪ. ಕ. ಭೂತೆ ಹಾಗೂ ಸದಸ್ಯರಾದ ಶ್ರೀಮತಿ ವಿ.ಎ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಅವರು ಎಲ್ಐಸಿಯು ಫಿರ್ಯಾದಿದಾರರು ಪಾಲಸಿ ಹೊಂದಿದ್ದರೂ, ಅವರಿಗೆ ಸರಿಯಾಗಿ ಸ್ಪಂದಿಸದೇ ಸೇವಾ ನ್ಯೂನ್ಯತೆ ಎಸಗಿದೆ ಎಂದು ಅಭಿಪ್ರಾಯಪಟ್ಟು ದೂರುದಾರರ ವೈದ್ಯಕೀಯ ವೆಚ್ಚ 79,216 ರೂಪಾಯಿಗಳನ್ನು ಮತ್ತು ಅವರ ಕ್ಲೇಮ್ ತಿರಸ್ಕರಿಸಿದ ದಿನಾಂಕದಿಂದ ಹಣ ಸಂದಾಯ ಮಾಡುವವರೆಗೆ ಶೇ.8ರ ಬಡ್ಡಿ ಸಮೇತ ಹಣವನ್ನು ಕೊಡಬೇಕು ಹಾಗೂ ದೂರುದಾರರಿಗೆ ಆಗಿರುವ ಮಾನಸಿಕ ಹಿಂಸೆ, ಅನಾನುಕೂಲತೆಗಾಗಿ 50 ಸಾವಿರಗಳ ಪರಿಹಾರದ ಜೊತೆಗೆ ಪ್ರಕರಣದ ಖರ್ಚು ಅಂತಾ 10 ಸಾವಿರಗಳನ್ನು ಕೊಡಬೇಕು ಎಂದು ತೀರ್ಪು ನೀಡಿ ಆದೇಶಿಸಿದೆ.
Kshetra Samachara
11/10/2022 06:16 pm