ಹುಬ್ಬಳ್ಳಿ: ಅದು ರಾಜ್ಯದಲ್ಲಿಯೇ ಶಿಸ್ತಿಗೆ ಹೆಸರಾದ ಇಲಾಖೆ.ಯಾರೇ ಅಶಿಸ್ತು ತೋರಿದರೆ ಅಂತವರಿಗೆ ಕಾನೂನಿನ ಪಾಠ ಹೇಳುವ ಇವರೇ ದಾರಿ ಬಿಟ್ಟರೆ ಹೇಗೆ. ಮಾಮುಲಿ ಬರಲಿಲ್ಲ ಅಂತ ಪೊಲೀಸ್ ಪೇದೆಯ ಮೇಲೆಯೇ ಎಸಿಪಿಯೊಬ್ಬರು ಹಲ್ಲೆ ಮಾಡಿ ದರ್ಪ ಮೆರೆದಿದ್ದಾರೆ. ಆ ಮೂಲಕ ಶಿಸ್ತಿನ ಇಲಾಖೆ ಮರ್ಯಾದೆಯನ್ನ ಮೂರು ಕಾಸಿಗೆ ಹರಾಜು ಹಾಕಿದ್ದಾರೆ. ಸದ್ಯ ಎಸಿಪಿ ಹಲ್ಲೆ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ದೃಶ್ಯವನ್ನೊಮ್ಮೆ ನೋಡಿದ್ರೆ ಎಂಥವರಿಗೂ ಕೋಪ ಬಂದೇ ಬರುತ್ತೆ. ಎಣ್ಣೆ ಗುಂಗಲ್ಲಿ ಠಾಣೆಗೆ ಬಂದಿದ್ದ ಹಿರಿಯ ಅಧಿಕಾರಿ ಪೊಲೀಸ್ ಪೇದೆಯ ಮೇಲೆ ಹಲ್ಲೆ ಮಾಡಿ ದರ್ಪ ಮೆರೆದಿದ್ದಾನೆ. ಅಷ್ಟಕ್ಕೂ ಈ ನಾಚಿಕೆಗೇಡಿನ ಘಟನೆ ನಡೆದಿದ್ದು,ಹುಬ್ಬಳ್ಳಿಯ ದಕ್ಷಿಣ ಸಂಚಾರ ಠಾಣೆಯಲ್ಲಿ.ಮೊನ್ನೆ ರಾತ್ರಿ ನೈಟ್ ರೌಂಡ್ ಇದ್ದ ಟ್ರಾಫಿಕ್ ಎಸಿಪಿ ಎಂ.ಎಸ್ ಹೊಸಮನಿ ಮಧ್ಯರಾತ್ರಿ ಠಾಣೆಗೆ ಬಂದಿದ್ದಾರೆ. ಅದು ಫುಲ್ ಟೈಟ್ ಆಗಿ ಬಂದಿದ್ದ ಎಸಿಪಿ ಸಾಹೇಬರು ಮರಳು ದಂಧೆಯ ಮಾಮೂಲಿಗೆ ಜಗಳಕ್ಕೆ ಬಿದ್ದಿದ್ದರು. ಆ ವೇಳೆ ಠಾಣೆಯಲ್ಲಿ ಓರ್ವ ಪೇದೆ ಮಲಗಿದ್ದರಂತೆ. ಹೀಗಾಗೇ ಅವನನ್ನು ಯಾಕೆ ಮಲಗಲು ಬಿಟ್ಟಿದ್ದಿಯಾ ಅಂತ ಸೆಂಟ್ರಿಯಾಗಿದ್ದ ಪೇದೆ ಮೇಲೆ ಏಕಾ ಏಕಿ ಅಟ್ಯಾಕ್ ಮಾಡಿದ್ದಾರೆ. ಅಲ್ಲದೇ ಆತನಿಗ ಕಪಾಳ ಮೋಕ್ಷ ಮಾಡಿ ದರ್ಪ ಮೆರೆದಿದ್ದಾರೆ. ಇನ್ನೂ ಎಸಿಪಿ ಈ ದರ್ಪದ ದೃಶ್ಯ ಠಾಣೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಅಸಲಿಗೆ ಮೊನ್ನೆಯೂ ಅದೇ ಠಾಣೆಯಲ್ಲಿ ಎಸಿಪಿ ಹಾಗೂ ಸಿಬ್ಬಂದಿ ಮಧ್ಯೆ ವಾಗ್ವಾದ ನಡೆದಿತ್ತಂತೆ. ಎಸಿಪಿ ಹೊಸಮನಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರಂತೆ. ಅದೇ ಸಿಟ್ಟನ್ನ ಪ್ರದರ್ಶನ ಮಾಡಿದ್ದಾರಂತೆ. ಸದ್ಯ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬುರಾಮಸಿಂಗ್ ಡಿಸಿಪಿ ಆರ್.ಬಿ.ಬಸರಗಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದಾರೆ.
ಸದ್ಯ ಈ ಎಸಿಪಿ ಸಾಹೇಬ್ರಿಗೂ ದಕ್ಷಿಣ ಸಂಚಾರ ಠಾಣೆಗೂ ಮೊದಲಿಂದಲೂ ಕಿರಿಕ್ ನಡೆಯುತ್ತಲೇ ಇದೆ. ಯಾಕೆಂದರೆ ಮರಳು ತುಂಬಿದ ಲಾರಿಗಳು ನಗರಕ್ಕೆ ಯಥೇಚ್ಛವಾಗಿ ಆಗಮಿಸಿದ್ರು ನೀವು ಮಾಮೂಲಿ ತಂದು ಕೊಡಲ್ಲ ಅನ್ನೋ ಆರೋಪ ಮಾಡುತ್ತಿದ್ದಂತೆ. ಅಲ್ಲದೇ ಆ ಬಗ್ಗೆ ಸಾಕಷ್ಟು ಬಾರಿ ಕಿರಿಕ್ ಮಾಡಿದ್ರಂತೆ. ಆದರೆ ಮೊನ್ನೆ ಖುದ್ದು ಪೊಲೀಸ್ ಕಮಿಷನರ್ ಲಾಬೂರಾಮ್ ಮರಳು ದಂಧೆಗೆ ಕಡಿವಾಣ ಹಾಕಲೂ ಖಡಕ್ ಸೂಚನೆ ನೀಡಿದರು. ಹೀಗಾಗೇ ಎಲ್ಲವೂ ಕಂಪ್ಲೀಟ್ ಬಂದ್ ಆಗಿತ್ತು. ಅದ್ರೂ ಎಸಿಪಿ ಮಾತ್ರ ಮಾಮೂಲಿ ಕೇಳೋದು ಬಿಟ್ಟಿರಲಿಲ್ಲವಂತೆ. ಹೀಗಾಗೇ ಜಗಳ ಆಗಿ ಈ ರೀತಿ ಹಲ್ಲೆ ಮಾಡಲು ಕಾರಣ ವಾಗಿದೆಯಂತೆ. ಆದ್ರೆ ಸಾರ್ವಜನಿಕರಿಗೆ ಶಿಸ್ತಿನ ಪಾಠ ಹೇಳಬೇಕಿದ್ದ ಪೊಲೀಸರಿಗೆ ಈ ರೀತಿ ಹಲ್ಲೆ ಮಾಡಿದ್ರೆ ಹೇಗೆ ಎನ್ನುತ್ತಿದ್ದಾರೆ ಸಾರ್ವಜನಿಕರು..
ಸದ್ಯ ಡಿಸಿಪಿ ಕ್ರೈಂ ಟ್ರಾಫಿಕ್ ವಿಭಾಗದ ಡಿಸಿಪಿ ಬಸರಗಿ ನೈತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಠಾಣೆಯ ಸಿಸಿಟಿವಿ ವಿಡಿಯೋ ಹೇಗೆ ಲೀಕ್ ಆಯಿತು ಎನ್ನೋ ಬಗ್ಗೆ ತನಿಖೆ ನಡೆಸಲಾಗುತ್ತಿದೆಯಂತೆ. ಅದೆನೋ ಅಂತರಲ್ಲಾ ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಅಂತ ಹಾಗಾಯಿತು ಈ ಕಥೆ ಎನ್ನುತ್ತಾರೆ ನೊಂದ ಪೊಲೀಸರು. ಅದೇ ಏನೆ ಇರಲಿ ಈ ರೀತಿ ಹಫ್ತಾಕ್ಕಾಗಿ ಹಲ್ಲೆ ಮಾಡಿದ್ದು, ಸಾರ್ವಜನಿಕ ವಲಯದಲ್ಲಿ ತಲೆತಗ್ಗಿಸುವಂತಾಗಿದ್ದು ಮಾತ್ರ ನಿಜಕ್ಕೂ ದುರಂತ.
Kshetra Samachara
22/12/2020 06:08 pm