ಪಬ್ಲಿಕ್ ನೆಕ್ಸ್ಟ್ ಧ್ವನಿ : ಕೇಶವ ನಾಡಕರ್ಣಿ
ಹುಬ್ಬಳ್ಳಿ : ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ತವರಿನ ಪೊಲೀಸರು ನಿತ್ಯ ಒಂದಿಲ್ಲೊಂದು ರೀತಿ ಸುದ್ದಿಯಲ್ಲಿರುತ್ತಾರೆ. ಅಪರಾಧ ಪ್ರಕರಣಗಳನ್ನು ಪತ್ತೆ ಮಾಡುವುದು, ಕುಖ್ಯಾತರನ್ನು ಹೆಡಮುರಿ ಕಟ್ಟುವುದು ಅಥವಾ ಕೊಲೆ ಸುಲಿಗೆಗಳನ್ನು ತಡೆಯುವುದಕ್ಕಲ್ಲ.
ಬದಲಾಗಿ ಹೆಚ್ಚಾಗಿ ತಮ್ಮ ತಮ್ಮೊಳಗೆ ಕಿತ್ತಾಡಿಕೊಂಡು, ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿಯೋ, ಇಲ್ಲವೇ ವಕೀಲರೊಂದಿಗೆ ಗುದ್ದಾಡಿಕೊಂಡೋ ಸುದ್ದಿಯಾಗುತ್ತಿದ್ದಾರೆ. ಈಗ ಎರಡು ದಿನಗಳ ಹಿಂದೆ ಓರ್ವ ಪೊಲೀಸ್ ಪೇದೆ ವಿರುದ್ಧವೇ ಎಫ್ಐಆರ್ ದಾಖಲಾಗಿದೆ.
ಇವರು ಮಾತ್ರವಲ್ಲ ಈ ಹಿಂದಿನ ಪೊಲೀಸ್ ಆಯುಕ್ತ ಆರ್. ದಿಲೀಪ್ ಹಾಗೂ ಡಿಸಿಪಿ ನಡುವೆ ಪತ್ರ ಸಮರ ನಡೆದು, ಅದು ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರು ಮಧ್ಯ ಪ್ರವೇಶಿಸುವವರೆಗೂ ಹೋಗಿತ್ತು. ಆ ಪ್ರಕರಣಗಳನ್ನು ವಿವರಿಸುವ ಅಗತ್ಯವಿಲ್ಲ. ಇದೇ ಕಾರಣಕ್ಕೋ ಏನೋ ಆಯುಕ್ತ ಆರ್. ದಿಲೀಪ್ ಅವರ ಎತ್ತಂಗಡಿಯೂ ಆಗಿತ್ತು.
ಅದೇ ರೀತಿ ನವನಗರ ಠಾಣೆ ಸಿಪಿಐ ಒಬ್ಬರ ಹೆಸರು ವಂಚನೆ ಪ್ರಕರಣವೊಂದರಲ್ಲಿ ಕೇಳಿ ಬಂದಿತ್ತು. ಮುಂದೆ ಅದೇ ಅಧಿಕಾರಿಯು ವಕೀಲರೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಅವರ ವಿರುದ್ಧ ವಕೀಲ ಸಮುದಾಯ ಧಾರವಾಡದಲ್ಲಿ ಪ್ರತಿಭಟನೆ ನಡೆಸಿತ್ತು. ಮುಂದೆ ಇಬ್ಬರ ನಡುವೆಯೂ ಸಂಧಾನವಾದರೂ ಅವರನ್ನು ಅಲ್ಲಿಂದ ವರ್ಗಾವಣೆ ಮಾಡಲಾಯಿತು.
ಈಗ ತಾಜಾ ಪ್ರಕರಣವೆಂಬಂತೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ಹಿರಿಯ ಅಧಿಕಾರಿ ಪೇದೆ ಹಾಗೂ ಎಎಸ್ಐ ಮೇಲೇ ದರ್ಪ ತೋರಿದ ವಿಡಿಯೋ ವೈರಲ್ ಆಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಅಕ್ರಮ ಮರಳು ಸಾಗಾಟವನ್ನು ತಡೆಯುವಂತೆ ಆಯುಕ್ತ ಲಾಬೂರಾಮ್ ಸಿಂಗ್ ಎಲ್ಲ ಸಿಬ್ಬಂದಿಗೆ ಕಟ್ಟು ನಿಟ್ಟಾಗಿ ಆದೇಶಿಸಿದ್ದಾರಂತೆ. ಅದರಂತೆ ರಾತ್ರಿ ಡ್ಯೂಟಿಯಲ್ಲಿದ್ದ ಪೇದೆಗಳು ಕರ್ತವ್ಯ ನಿರ್ವಹಿಸಿ ಕೆಲವು ಲಾರಿಗಳನ್ನು ತಡೆಹಿಡಿದಿದ್ದರಂತೆ.
ಇದರಿಂದ ಕೋಪಗೊಂಡ ಎಸಿಪಿ ಹೊಸಮನಿ ಎಂಬವರು ಠಾಣೆಗೆ ಬಂದು, ತಮ್ಮೆದುಗಿರಗೆ ಬಂದು ಸಲ್ಯೂಟ್ ಹೊಡೆದ ಪೇದೆ ಕಪಾಳಿಗೆ ಜೋರಾಗಿ ಬಾರಿಸಿದ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿ ವೈರಲ್ ಆಗಿದೆ.
ಇದು ಪಬ್ಲಿಕ್ ನೆಕ್ಸ್ಟ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದರಿಂದ ಸಾರ್ವಜನಿಕರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗ ತೊಡಗಿದೆ.
ಬಹುತೇಕರು ಎಸಿಪಿ ಹೊಸಮನಿ ಅವರ ದರ್ಪವನ್ನು ಖಂಡಿಸಿ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಕಮೀಶ್ನರ್ ಲಾಬೂರಾಮ್ ಅವರನ್ನು ಒತ್ತಾಯಿಸಿದ್ದರೆ, ಸೂಕ್ತ ಕಾರಣ ತಿಳಿಯದೆ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳುವುದು ಸೂಕ್ತವಲ್ಲ ಎಂದು ಕೆಲವರು ಸಲಹೆ ಮಾಡಿದ್ದಾರೆ.
ಇನ್ನು ಹಲವರು, ಅಧಿಕಾರಿ ಹೊಸಮನಿ ಪೇದೆ ಕ್ಷಮೆ ಕೇಳಬೇಕು, ಈ ರೀತಿ ನಿರಂತವಾಗಿ ಪೇದೆಗಳು ಹಿರಿಯ ಅಧಿಕಾರಿಗಳ ದರ್ಪಕ್ಕೆ ಒಳಗಾಗುತ್ತಿದ್ದಾರೆ. ಇದನ್ನು ತಡೆಯಲೇ ಬೇಕು ಎಂದಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ನಿಲುವು : ಅಧಿಕಾರಿಯು ಹೊಡೆಯಲು ನಿಜವಾದ ಕಾರಣಗಳೇನು ಗೊತ್ತಾಗಿಲ್ಲ. ಒಂದು ವೇಳೆ ಕಾನೂನಿಗೆ ವಿರುದ್ಧವಾಗಿ ಆ ಪೇದೆ ಲಾರಿಗಳನ್ನು ತಡೆದಿದ್ದೇ ಆಗಿದ್ದರೆ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸಬಹುದಿತ್ತು, ಇಲ್ಲವೇ ಪೊಲೀಸ್ ಆಯುಕ್ತರಿಗೆ ವರದಿ ಸಲ್ಲಿಸಬಹುದಿತ್ತು. ಅದನ್ನು ಬಿಟ್ಟು ನೇರವಾಗಿ ಹೊಡೆದ್ದು ಏಕೆ ಎಂದು ಜನ ಪ್ರಶ್ನಿಸುವಂತಾಗಿದೆ.
ಒಬ್ಬ ಸರಕಾರಿ ನೌಕರರ ಇನ್ನೊಬ್ಬ ನೌಕರನನ್ನು ಥಳಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಆತನ ವಿರುದ್ಧ ಕ್ರಮಕೈಗೊಳ್ಳಲು ಅವಕಾಶವಿದೆ ಹೊರತು ದೈಹಿಕವಾಗಿ ಆತನನ್ನು ದಂಡಿಸಲು ನಿಮಗೆ ಅಧಿಕಾರ ನೀಡಿಲ್ಲ.
ಠಾಣೆಗಳಲ್ಲಿ ಪೊಲೀಸ್ ಸಿಬ್ಬಂದಿಯ ಪರಿಸ್ಥಿತಿ ಹೀಗಾದರೆ ಇನ್ನು ಜನಸಾಮಾನ್ಯರ ಗತಿ ಏನು? ಆಯುಕ್ತ ಲಾಬೂರಾಮ್ ಸಿಂಗ್ ಇದಕ್ಕೆ ಉತ್ತರ ನೀಡುವ ಪ್ರಯತ್ನ ಮಾಡುವರೆ? ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡರೆ ಮಾತ್ರ ಕೆಳವರ್ಗದ ಸಿಬ್ಬಂದಿಯ ಮನೋಬಲ ಹೆಚ್ಚಲು ಸಾಧ್ಯ
Kshetra Samachara
20/12/2020 05:30 pm