ಹುಬ್ಬಳ್ಳಿ: ಇವರೆಲ್ಲ ವರ್ಷಾನುಗಟ್ಟಲೇ ಅಲ್ಲಿ ಇಲ್ಲಿ ಚಿಂದಿ ಆರಿಸಿ ತಮ್ಮ ದಿನದ ಬದುಕು ಕಟ್ಟಿಕೊಳ್ಳುವವರು. ಹೊಟ್ಟೆಗೆ ಬಟ್ಟೆ ಕಟ್ಟಿಕೊಂಡು ಕೈಲಾದಷ್ಟು ಹಣ, ಚಿನ್ನ ಮಾಡಿಕೊಂಡಿದ್ದರು. ಆದರೆ ಹೆತ್ತ ಮಗಳು ಇವೆಲ್ಲವನ್ನು ಕದ್ದುಕೊಂಡು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಇದಕ್ಕೆ ನೊಂದ ಪಾಲಕರು ಪೊಲೀಸ್ ಠಾಣೆಗೆ ದೂರು ಕೊಡಲು ಹೋದರೆ ಅಲ್ಲಿನ ಪೊಲೀಸರು ಹಾಗೂ ಇನ್ಸ್‌ಪೆಕ್ಟರ್ ನಾಳೆ ಬಾ, ನಾಡಿದ್ದು ಬಾ ಎಂದು ಬೋರ್ಡ್ ಹಾಕುತ್ತಿದ್ದಾರೆ ಅನ್ನೋದು ಆ ನೊಂದ ಜೀವಗಳ ಆರೋಪವಾಗಿದೆ.
ಹೀಗೆ ಕಣ್ಣೀರು ಹಾಕುತ್ತ, ಕೈಯಲ್ಲಿ ತಮ್ಮ ಮಗಳ ಫೋಟೋ ಹಿಡಿದು ನಿಂತಿರುವ ಇವರು ಮಂಜುಳಾ ಹಾಗೂ ಭಗರಿಯಾ. ಧಾರವಾಡದ ಲಕ್ಷ್ಮೀ ಸಿಂಗನಕೆರೆ ಗೋಸಾವಿ ಓಣಿಯ ನಿವಾಸಿಗಳು. ತಾಯಿ ಸುಮಾರು ವರ್ಷಗಳಿಂದ ಹೃದಯ ರೋಗದಿಂದ ಬಳಲುತಿದ್ದಾರೆ. ಇವರು ಚಿಂದಿ ಆರಿಸಿ ಜೀವನ ನಡೆಸುವವರು. ಈಗಾಗಲೇ ಮೂರು ಮದುವೆ ಆಗಿರುವ ಕಿರಣ ಭೋಪಾಲ ಗೋಸಾವಿ ಎಂಬಾತನೊಂದಿಗೆ ತಮ್ಮ ಮಗಳು ರೇಷ್ಮಾ ಪರಾರಿಯಾಗಿದ್ದಾಳೆ. ಹೋಗುವಾಗ ಮನೆಯಲ್ಲಿ ತಾಯಿಯ ಹೃದಯ ಚಿಕಿತ್ಸೆಗಾಗಿ ಕೂಡಿಸಿಟ್ಟಿದ್ದ ಹಣ ಹಾಗೂ ಒಡವೆಯನ್ನೂ ತೆಗೆದುಕೊಂಡು ಹೋಗಿದ್ದಾಳೆ. ಇದರ ಬಗ್ಗೆ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಗೆ ದೂರು ಕೊಡಲು ಹೋದರೆ ಅಲ್ಲಿದ್ದ ಪೊಲೀಸರು ಹಾಗೂ ಇನ್ಸ್‌ಪೆಕ್ಟರ್ ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಸುಮಾರು 15 ದಿನಗಳಿಂದ ಕಾಡಿಸುತ್ತಿದ್ದಾರೆಂದು ರೇಷ್ಮಾಳ ಪೋಷಕರು ಆರೋಪಿಸಿದ್ದಾರೆ.
ಒಟ್ನಲ್ಲಿ ಈ ನೊಂದ ತಾಯಿ ಹೃದಯ ರೋಗದಿಂದ ಬಳಲುತ್ತಿದ್ದಾರೆ. ಅತ್ತ ಮಗಳು ಚಿಕಿತ್ಸೆಗೆ ಮನೆಯಲ್ಲಿಟ್ಟಿದ್ದ ಹಣ ಮತ್ತು ಚಿನ್ನವನ್ನು ತೆಗೆದುಕೊಂಡು ಪರಾರಿಯಾಗಿದ್ದಾಳೆ. ಒಂದೆಡೆ ಹಣವೂ ಹೋಯ್ತು, ಚಿನ್ನವೂ ಹೋಯ್ತು, ಗುಣವೂ ಹೋಯ್ತು, ಮಗಳೂ ಹೋದ್ಲು, ಆಕೆಯೊಂದಿಗೆ ಮರ್ಯಾದೆಯೂ ಹೋಯ್ತು ಎಂಬ ನೋವಿನಲ್ಲಿ ಈ ನತದೃಷ್ಟ ದಂಪತಿ ಇದ್ದಾರೆ. ಇದಕ್ಕೆ ಸಂಬಂಧಿಸಿದ ಧಾರವಾಡ ವಿದ್ಯಾಗಿರಿ ಪೊಲೀಸರು ಈ ಇವರ ದೂರು ತೆಗೆದುಕೊಂಡು ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕಾಗಿದೆ.....
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/01/2022 03:56 pm