ಧಾರವಾಡ: ಅವರಿಬ್ಬರೂ ಕುಚಿಕು ಗೆಳೆಯರು. ಒಬ್ಬರಿಗೊಬ್ಬರು ಜೀವ ಕೊಡುವ ಮಟ್ಟಿಗೆ ಅವರ ಗೆಳೆತನವಿತ್ತು. ಇದೇ ಕಾರಣಕ್ಕೆ ಅದರಲ್ಲಿ ಒಬ್ಬನಿಗೆ ತೊಂದರೆಯಾದಾಗ ಮತ್ತೊಬ್ಬ ಸಹಾಯ ಹಸ್ತ ಚಾಚಿದ್ದ. ಆದರೆ, ಸಹಾಯ ಪಡೆದ ಗೆಳೆಯ ಮಾತ್ರ ಕೈಕೊಟ್ಟು ಓಡಿ ಹೋಗಿದ್ದಾನೆ. ಇದರಿಂದಾಗಿ ಇದೀಗ ಸಹಾಯ ಮಾಡಿದ ಯುವಕ ಈ ಪ್ರಪಂಚವನ್ನೇ ಬಿಟ್ಟು ಹೋಗಿದ್ದಾನೆ.
ಹೀಗೆ ಫೋಟೋದಲ್ಲಿ ಕಾಣುತ್ತಿರುವ ಈತನ ಹೆಸರು ಕಾರ್ತಿಕ್ ಕಾಟಕರ್. ವಯಸ್ಸು ಈಗಷ್ಟೇ 27 ವರ್ಷ. ಈ ಯುವಕ ಧಾರವಾಡ ನಗರದ ಗಾಂಧಿ ವೃತ್ತದ ಬಳಿಯ ನಿವಾಸಿ.
ಲಾಂಡ್ರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕಾರ್ತಿಕ್ ಗುರುವಾರ ಮಟ ಮಟ ಮಧ್ಯಾಹ್ನವೇ ಈ ಜಗತ್ತಿನಿಂದ ಮರೆಯಾಗಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣಿಗೆ ಶರಣಾಗಿರೋ ಕಾರ್ತಿಕ್ ಕಾಟಕರ್, ಮತ್ತ್ಯಾವತ್ತೂ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾನೆ. ಇದಕ್ಕೆ ಕಾರಣ ಆತನ ಕುಚಿಕು ಗೆಳೆಯ.
ಹೌದು.. ಕಾರ್ತಿಕ್, ತನ್ನ ಪ್ರಾಣಕ್ಕಿಂತಲೂ ಹೆಚ್ಚು ನಂಬಿದ್ದ ಗೆಳೆಯನೇ ಇದಕ್ಕೆ ಕಾರಣವಂತೆ. ಕಾರ್ತಿಕ್ ಹಾಗೂ ಸುನಿಲ್ ಜೋಶಿ ಆತ್ಮೀಯ ಸ್ನೇಹಿತರು. ಒಬ್ಬರನ್ನೊಬ್ಬರು ಬಿಟ್ಟಿರಲಾಗದಷ್ಟು ಗಾಢ ಗೆಳೆತನ ಇಬ್ಬರ ಮಧ್ಯೆ ಇತ್ತು. ಕೆಲ ವರ್ಷಗಳ ಹಿಂದೆ ಸುನಿಲ್ ಜೋಶಿಗೆ ಆರ್ಥಿಕ ಸಮಸ್ಯೆಯುಂಟಾಗಿತ್ತು.
ಈ ವೇಳೆ ಸುನಿಲ್ ಧಾರವಾಡದ ಕೆವಿಜಿ ಬ್ಯಾಂಕ್ ನಲ್ಲಿ ಸಾಲ ಮಾಡಿದ್ದ. ಆ ಸಾಲಕ್ಕೆ ಕಾರ್ತಿಕ್ ಜಾಮೀನು ಆಗಿದ್ದ. ಆದರೆ, ಸುನಿಲ್ ಸಾಲ ತೀರಿಸದೇ ಇದ್ದಿದ್ದಕ್ಕೆ ಬ್ಯಾಂಕ್ ಆತನಿಗೆ ನೋಟಿಸ್ ಕೊಟ್ಟಿತ್ತು.
ಮೂರು ತಿಂಗಳ ಹಿಂದೆಯೇ ಸುನಿಲ್ ಊರು ಬಿಟ್ಟು ಓಡಿ ಹೋಗಿದ್ದಾನೆ. ಆತ ಎಲ್ಲಿದ್ದಾನೆ ಅನ್ನುವುದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಆ ಸಾಲವನ್ನು ಇದೀಗ ಕಾರ್ತಿಕ್ ತೀರಿಸೋ ಸ್ಥಿತಿ ನಿರ್ಮಾಣವಾಗಿತ್ತಂತೆ. ಈ ಹಿನ್ನೆಲೆಯಲ್ಲಿ ಡೆತ್ ನೋಟ್ ಬರೆದಿಟ್ಟು ಮನೆಯಲ್ಲಿಯೇ ಕಾರ್ತಿಕ್ ನೇಣಿಗೆ ಶರಣಾಗಿದ್ದಾನೆ.
ಆತ್ಮಹತ್ಯೆಗೂ ಮುನ್ನ ಕಾರ್ತಿಕ್ ಡೆತ್ ನೋಟ್ ಬರೆದಿದ್ದು, ಅದರಲ್ಲಿ ತನ್ನ ಸಾವಿಗೆ ಕಾರಣ ಗೆಳೆಯ ಸುನಿಲ್ ಜೋಶಿ ಅಂತಾ ಸ್ಪಷ್ಟವಾಗಿ ದಾಖಲಿಸಿದ್ದಾನೆ. ಅಷ್ಟಕ್ಕೂ ಆ ಡೆತ್ ನೋಟ್ ನಲ್ಲಿ ಏನಿದೆ ಅಂದ್ರೆ, ನನ್ನ ಸಾವಿಗೆ ಕಾರಣ ನನ್ನ ಗೆಳೆಯ ಸುನಿಲ್ ಜೋಶಿ. ಈತ ಕೆವಿಜಿ ಬ್ಯಾಂಕಿನಲ್ಲಿ ಮಾಡಿದ ಸಾಲಕ್ಕೆ ನಾನು ಜಾಮೀನು ಆಗಿದ್ದೆ.
ಆತ ಬ್ಯಾಂಕಿಗೆ ಸಾಲ ಕಟ್ಟದೇ ಇದ್ದಿದ್ದಕ್ಕೆ ಆ ಸಾಲವನ್ನು ನಾನು ತೀರಿಸುವ ಸ್ಥಿತಿ ಬಂದಿತ್ತು. ಸುನಿಲ್ ಜೋಶಿ ಕಾರಣದಿಂದಲೇ ನಾನು ನನ್ನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದೇನೆ. ಅಣ್ಣಾ, ಅಮ್ಮನನ್ನು ಚೆನ್ನಾಗಿ ನೋಡಿಕೋ...
ನೀನು ಚೆನ್ನಾಗಿ ಇರು. ನಾನು ಮಾಡಿದ ಹಾಗೆ ಯಾರೂ ಮಾಡಿಕೊಳ್ಳಬೇಡಿ. ಅಮ್ಮ ಐ ಲವ್ ಯೂ... ಅಣ್ಣಾ ಐ ಲವ್ ಯೂ... ಫ್ರೆಂಡ್ಸ್ ಐ ಲವ್ ಯೂ... ಇಂತಿ ನಿಮ್ಮ ಕಾರ್ತಿಕ್ ಕಾಟಕರ್
ಹೀಗೆ ಡೆತ್ ನೋಟ್ ಬರೆದಿಟ್ಟು ಕಾರ್ತಿಕ್ ನೇಣಿಗೆ ಶರಣಾಗಿದ್ದಾನೆ. ಏನೇ ಆಗಲಿ ಕಷ್ಟದ ಸಮಯದಲ್ಲಿ ಗೆಳೆಯನಿಗೆ ಸಹಾಯ ಮಾಡಿದ್ದಕ್ಕೆ ಕಾರ್ತಿಕ್ ತನ್ನ ಪ್ರಾಣವನ್ನೇ ಬಲಿ ಕೊಟ್ಟಿದ್ದಾನೆ.
Kshetra Samachara
26/12/2020 06:32 pm