ಹುಬ್ಬಳ್ಳಿ: ಕೇಂದ್ರ ಸರ್ಕಾರದ ಹರ್ ಘರ ತಿರಂಗಾ ಯೋಜನೆಗೆ ಸರ್ಕಾರದ ಕಚೇರಿಯಲ್ಲಿಯೇ ಅವಮಾನ ಮಾಡಲಾಗುತ್ತಿದೆ. ಬೇಕಾಬಿಟ್ಟಿಯಾಗಿ ಆಚರಣೆ ಮಾಡುವುದಾದರೇ ಇಂತಹ ಅವ್ಯವಸ್ಥೆಯ ಆಚರಣೆ ಬೇಕಿರಲಿಲ್ಲ. ಅಮೃತ ಮಹೋತ್ಸವದ ಹೆಸರಲ್ಲಿ ಅವಮಾನ ಸರಿಯಲ್ಲ ಎಂದು ಅವಳಿನಗರದ ಜನರು ಸರ್ಕಾರ ಹಾಗೂ ಮಹಾನಗರ ಪಾಲಿಕೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಹೌದು.. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಬೆನ್ನಲ್ಲೇ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯೂ ಅಂಥದ್ದೇ ಎಡವಟ್ಟು ಮಾಡಿಕೊಂಡಿದೆ. ಬೇಕಾಬಿಟ್ಟಿ ತ್ರಿವರ್ಣ ಧ್ವಜ ಮುದ್ರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ 'ಹರ್ ಫರ್ ತಿರಂಗಾ ಅಭಿಯಾನದಲ್ಲಿ ಮಹಾನಗರ ಪಾಲಿಕೆ ಆರಂಭದಲ್ಲಿ ಎಡವಟ್ಟು ಮಾಡಿಕೊಂಡಿದೆ.
ಹರಿದಿರುವ ಹಾಗೂ ಬೇಕಾಬಿಟ್ಟಿಯಾಗಿ ಮುದ್ರಿಸಿರುವ ಇಂಥ ಧ್ವಜಗಳನ್ನು ಖರೀದಿಸಿರುವ ಮಹಾನಗರ ಪಾಲಿಕೆ ಅವುಗಳನ್ನು ಪಾಲಿಕೆ ಸದಸ್ಯರ ಮೂಲಕ ಸಾರ್ವಜನಿಕರಿಗೆ ಹಂಚಲು ಮುಂದಾಗಿದೆ. ಶೇ. 70ಕ್ಕಿಂತ ಹೆಚ್ಚು ದೋಷಪೂರಿತ ಧ್ವಜಗಳು ವಲಯ 9ರ ಕೆಲ ವಾರ್ಡ್‌ಗಳಲ್ಲಿ ಕಂಡುಬಂದಿವೆ. ಖರೀದಿಸಿದ ಧ್ವಜಗಳು ಸರಿಯಾಗಿ ಇವೆಯೆ ಎಂಬುದನ್ನೂ ಗಮನಿಸದೇ ವಲಯಾಧಿಕಾರಿಗಳು ಪಾಲಿಕೆ ಸದಸ್ಯರಿಗೆ ಧ್ವಜಗಳನ್ನು ಹಂಚಿದರೆ ಛೀಮಾರಿ ಹಾಕಿಸಿಕೊಳ್ಳಬೇಕಾಗುತ್ತದೆ ಎಂದು ಹೆಸರು ಹೇಳಲಿಚ್ಚಿಸದ ಪಾಲಿಕೆಯ ಸದಸ್ಯರು ಅಸಮಾಧಾನ ಹೊರಹಾಕಿದ್ದಾರೆ.
ಹರ್ ಘರ್ ತಿರಂಗಾ ಅಭಿಯಾನಕ್ಕೆ ದಿನಗಣನೆ ಆರಂಭವಾಗಿರುವ ಈ ಸಂದರ್ಭದಲ್ಲಿ ರಾಷ್ಟ್ರಧ್ವಜದ ಘನತೆ, ಗೌರವ ಕಾಪಾಡಿಕೊಳ್ಳುವ ಹೊಣೆಗಾರಿಕೆ ಪಾಲಿಕೆ ಹೆಗಲ ಮೇಲೇರಿದೆ. ಈಗಲಾದರೂ ತಪ್ಪು ತಿದ್ದಿಕೊಂಡು ಧ್ವಜ ನಿಯಮದಂತೆ ನಿರ್ಮಿಸಿದ ಉತ್ತಮ ದರ್ಜೆಯ ಧ್ವಜಗಳನ್ನು ಮಾತ್ರ ಜನರಿಗೆ ಹಂಚಿಕೆ ಮಾಡಬೇಕು ಎಂಬುದು ಪಬ್ಲಿಕ್ ನೆಕ್ಸ್ಟ್ ಕಳಕಳಿಯಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
10/08/2022 10:01 am