ಧಾರವಾಡ: ಇಂದು ನಾಡಿನಾದ್ಯಂತ ಶೋಕಾಚರಣೆ ಸಂಕೇತವಾದ ಮೊಹರಂ ಹಬ್ಬವನ್ನು ಆಚರಿಸಲಾಗುತ್ತಿದೆ. ಆದರೆ, ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮದಲ್ಲಿ ಇಂದು ನಿಜಕ್ಕೂ ಶೋಕ ಮಡುಗಟ್ಟಿದೆ.
ಮುಸ್ಲಿಂ ಸಮುದಾಯದವರು ಪವಿತ್ರವಾಗಿ ಆಚರಿಸಲ್ಪಡುವ ಈ ಮೊಹರಂ ಹಬ್ಬದಂದೇ ಮುಸ್ಲಿಂ ಸಮುದಾಯದ ಇಬ್ಬರು ಯುವಕರು ದಾರುಣವಾಗಿ ಅಸುನೀಗಿದ್ದು, ಇಡೀ ಗ್ರಾಮದಲ್ಲಿ ಶೋಕಾಚರಣೆಯ ಹಬ್ಬದಂದೇ ಶೋಕ ಮಡುಗಟ್ಟುವಂತೆ ಮಾಡಿದೆ.
ಹೌದು! ಗ್ರಾಮದ ಹಳೇಕೆರೆಯಲ್ಲಿ ಇಬ್ಬರು ಯುವಕರು ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. 16 ವರ್ಷದ ಕಾಶೀಂಸಾಬ್ ನದಾಫ್ ಎಂಬಾತ ಕೆರೆಯಲ್ಲಿ ಆಕಸ್ಮಿಕವಾಗಿ ಬಿದ್ದು ಮುಳುಗುತ್ತಿದ್ದ. ಇದನ್ನು ಕಂಡ ಶರೀಫ್ ನದಾಫ್ (22) ಎಂಬಾತ ಕಾಶೀಂನ ರಕ್ಷಣೆಗೆ ಮುಂದಾಗಿದ್ದಾನೆ. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಆಕಸ್ಮಿಕವಾಗಿ ಬಿದ್ದ ಕಾಶೀಂ ಹಾಗೂ ಆತನ ರಕ್ಷಣೆಗೆ ಮುಂದಾಗಿದ್ದ ಶರೀಫ್ ಇಬ್ಬರೂ ಈಜು ಬರದೇ ಕೆರೆಯಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಶೋಕಾಚರಣೆಯಂದೇ ತಮ್ಮ ಕುಟುಂಬದಲ್ಲಿ ಶಾಶ್ವತವಾಗಿ ಶೋಕ ಮಡುಗಟ್ಟುವಂತೆ ಆಗಿದೆ.
ಕೂಡಲೇ ಸ್ಥಳಕ್ಕೆ ಬಂದ ಗರಗ ಠಾಣೆ ಪೊಲೀಸರು ಇಬ್ಬರೂ ಯುವಕರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮೃತದೇಹಗಳ ಮುಂದೆ ಕುಟುಂಬಸ್ಥರು ರೋದಿಸುತ್ತಿದುದು ನಿಜಕ್ಕೂ ಕರಳು ಹಿಂಡುವಂತಿತ್ತು. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಗರಗ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Kshetra Samachara
20/08/2021 01:09 pm