ಧಾರವಾಡ:ಜಿಲ್ಲೆಯಲ್ಲಿ ನೈಸರ್ಗಿಕವಾಗಿ ವಿವಿಧ ರೀತಿಯ ಸಂಪನ್ಮೂಲಗಳ ಸಂಪತ್ತು ಇದೆ. ಅದನ್ನು ಕಾಪಾಡಿಕೊಂಡು ಜಿಲ್ಲೆಯ ನೈಸರ್ಗಿಕ ಪರಿಸರ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವ ಅಗತ್ಯವಿದೆ ಎಂದು ಇಕೋ ವಾಚ್ ಸಂಸ್ಥೆಯ ಮುಖ್ಯಸ್ಥರೂ ಆಗಿರುವ ಚಿತ್ರನಟ, ಪರಿಸರವಾದಿ ಸುರೇಶ ಹೆಬ್ಳೀಕರ್ ಹೇಳಿದರು.
ಧಾರವಾಡ ತಾಲೂಕಿನ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಸಿಡಾಕ್ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬೇಲೂರು ರೋಟರಿ ಕ್ಲಬ್ ಸಂಯುಕ್ತವಾಗಿ ಆಯೋಜಿಸಿದ್ದ ಧಾರವಾಡದ ಪರಿಸರ ಮತ್ತು ಆರ್ಥಿಕ ಅಭಿವೃದ್ಧಿ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದು ಅಭಿವೃದ್ಧಿ ಎಂದರೆ ನೈಸರ್ಗಿಕ ಸಂಪನ್ಮೂಲಗಳ ಯಥೇಚ್ಛ ಬಳಕೆ ಮತ್ತು ಕೈಗಾರಿಗಳ ವಿಸ್ತರಣೆಯಾಗಿದೆ.
ಮುಂದಾಲೋಚನೆ, ಸಮರ್ಪಕವಾದ ಕ್ರೀಯಾಯೋಜನೆ ಇಲ್ಲದೇ ಅಭಿವೃದ್ಧಿ ಹೆಸರಿನಲ್ಲಿ ಪರಿಸರವನ್ನು ಅಸಮತೋಲನಗೊಳಿಸುವ ಕಾರ್ಯ ನಡೆಯುತ್ತಿದೆ.
ಈ ಕುರಿತು ಧಾರವಾಡಿಗರು ಆತ್ಮಾವಲೋಕನ, ಚಿಂತನೆ ಮಾಡುವ ಅಗತ್ಯವಿದೆ. ಧಾರವಾಡ ಜಿಲ್ಲೆ ಮತ್ತು ಸುತ್ತಲಿನ ಜಿಲ್ಲೆಗಳ ಗಡಿಪ್ರದೇಶಗಳು ಅಮೂಲ್ಯವಾದ ಮಣ್ಣು, ನೀರು, ಸಸ್ಯ, ಗಾಳಿ ಮತ್ತು ಅರಣ್ಯ ಸಂಪತ್ತು ಹೊಂದಿವೆ. ಇದನ್ನು ಉಳಿಸಿಕೊಂಡು ನಾವು ಮತ್ತು ನಮ್ಮ ಕೈಗಾರಿಕೆಗಳು ಬೆಳೆಯಬೇಕು. ಅದಕ್ಕಾಗಿ ಒಂದು ಅಭಿವೃದ್ಧಿಪರ ನಿರ್ಧಿಷ್ಟ ನೀಲನಕ್ಷೆ ಸಿದ್ಧಪಡಿಸುವ ಅಗತ್ಯವಿದೆ ಎಂದು ಸುರೇಶ ಹೆಬ್ಳೀಕರ್ ಅಭಿಪ್ರಾಯಪಟ್ಟರು.
ಧಾರವಾಡ ಜಿಲ್ಲೆಯು ರಾಜ್ಯ ಮಾತ್ರವಲ್ಲ, ರಾಷ್ಟಮಟ್ಟದಲ್ಲಿ ತನ್ನದೇ ಆದ ಪ್ರಾಮುಖ್ಯತೆ, ಜನಪ್ರಿಯತೆ ಹೊಂದಿದೆ. ಇದಕ್ಕೆ ಇಲ್ಲಿನ ಸಾಹಿತ್ಯ, ಸಂಗೀತ, ಕಲೆ, ಕಾವ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳು ಕಾರಣವಾಗಿವೆ. ಇವುಗಳನ್ನು ಉಳಿಸಿ, ಬೆಳೆಸುವ ಮೂಲಕ ಧಾರವಾಡ ಅಭಿವೃದ್ಧಿ ಸಾಧಿಸಬೇಕು ಎಂದು ಸುರೇಶ ಹೆಬ್ಳೀಕರ್ ಹೇಳಿದರು.
ಕಾರ್ಯಾಗಾರದಲ್ಲಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ. ಶಾಂತ ತಮ್ಮಯ್ಯ, ಟಾಟಾ ಮೋಟಾರ್ಸ್‌ನ ಧಾರವಾಡ ಪ್ಲಾಂಟ್ ಮುಖ್ಯಸ್ಥ ಅಮೀತ್, ರೋಟರಿ ಕ್ಲಬ್ ಕಾರ್ಯದರ್ಶಿ ರಿತೇಶ ಉಪ್ಪನಾಳ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
Kshetra Samachara
20/07/2022 07:23 pm