ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ಪ್ರೇಮದ ಕಾಣಿಕೆ ಚಿತ್ರದ ಮೂಲಕ ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪುನೀತ್‌ರಾಜಕುಮಾರ ಇನ್ನಿಲ್ಲ ಎಂಬುದೇ ನಂಬಲಾರದ ಕಹಿ ಸತ್ಯ.
ಬೆಟ್ಟದ ಹೂವು ಚಿತ್ರದಲ್ಲಿ ಬಾಲನಟನಾಗಿ ನಟಿಸಿ ರಾಷ್ಟ್ರಮಟ್ಟದಲ್ಲಿ ಮಿಂಚಿದ್ದ ಪುನೀತ್ ಯುವರತ್ನ ಚಿತ್ರದ ಮೂಲಕ ತಮ್ಮ ಬಣ್ಣದ ಬದುಕಿಗೆ ವಿದಾಯ ಹೇಳಿದ್ದಾರೆ. ಅಪ್ಪು ಎಂದರೆ ಫಿಟ್ನೆಸ್, ಅಪ್ಪು ಎಂದರೆ ಶಿಸ್ತು, ಅಪ್ಪು ಎಂದರೆ ಅಚ್ಚುಕಟ್ಟಾದ ಅಭಿನಯ, ಅಪ್ಪು ಎಂದರೆ ಒಳ್ಳೆಯ ಅಭಿನಯ ಆದರೆ, ಇದರ ಪ್ರತಿರೂಪವಾದ ಪುನೀತ್ ರಾಜಕುಮಾರ ಇನ್ನು ನೆನಪು ಮಾತ್ರ.
ಯುವರತ್ನ ಚಿತ್ರದ ಚಿತ್ರೀಕರಣಕ್ಕಾಗಿ ಧಾರವಾಡದಲ್ಲೇ ಹಲವು ದಿನಗಳನ್ನು ಕಳೆದಿದ್ದ ಅಪ್ಪು ಎಲ್ಲರಿಗೂ ಹತ್ತಿರವಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳಿಗೆ ಸೆಲ್ಪಿ ನೀಡಿ ಎಲ್ಲರನ್ನೂ ಖುಷಿಪಡಿಸಿದ್ದ ಅಪ್ಪು ಇನ್ನ್ಯಾವತ್ತೂ ಬಾರದ ಲೋಕಕ್ಕೆ ತೆರಳಿದ್ದಾರೆ ಎಂಬುದನ್ನು ಕೇಳಿ ಎಲ್ಲರಿಗೂ ಭರ ಸಿಡಿಲು ಬಡಿದಂತಾಗಿದೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಶೂಟಿಂಗ್‌ಗೆ ಬಂದಿದ್ದ ಅಪ್ಪು ಅಲ್ಲಿ ಕಸ ಗುಡಿಸುವ ಪ್ರತಿಯೊಬ್ಬ ಸಿಬ್ಬಂದಿಗೆ ಬಕ್ಷೀಸು ನೀಡಿ ನೀವು ಸಾಕಷ್ಟು ಸ್ವಚ್ಛತಾ ಕಾರ್ಯ ಮಾಡಿ ನಮಗೆ ಸಹಕಾರ ನೀಡಿದ್ದೀರಿ ಎಂದು ಎಲ್ಲರೂ ಬಕ್ಷೀಸು ಕೊಟ್ಟು ಹೋಗಿದ್ರಂತೆ.
ಹಲವು ದಿನಗಳ ಕಾಲ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಯುವರತ್ನ ಚಿತ್ರದ ಚಿತ್ರೀಕರಣ ನಡೆದಿತ್ತು. ಈ ವೇಳೆ ಸ್ವಚ್ಛತಾ ಸಿಬ್ಬಂದಿ ಸಾಕಷ್ಟು ಕೆಲಸ ಮಾಡಿದ್ದರು. ಅವರ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದ ಅಪ್ಪು, ಅವರಿಗೆ ಬಕ್ಷೀಸು ನೀಡಿದ್ದಲ್ಲದೇ ಪ್ರತಿದಿನ ಊಟದ ಸಮಯಕ್ಕೆ ಸ್ವಚ್ಛತಾ ಸಿಬ್ಬಂದಿಯನ್ನೂ ತಮ್ಮೊಂದಿಗೆ ಕರೆದುಕೊಂಡು ಊಟ ಮಾಡಿ ಸರಳತೆ ಮೆರೆದಿದ್ದರು. ಅಂತಹ ಮೇರು ನಟನನ್ನು ಕಳೆದುಕೊಂಡು ಇದೀಗ ಇಡೀ ಕರುನಾಡು ಅಕ್ಷರಶಃ ಬಡವಾಗಿದೆ. ಇಡೀ ಚಿತ್ರರಂಗ ಯುವ ಉತ್ಸಾಹಿ ನಾಯಕ ನಟನನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಅಪ್ಪುವಿಗೆ ಮತ್ತೊಂದು ಜನ್ಮವಿದ್ದರೆ ಅವರು ಕನ್ನಡ ನಾಡಿನಲ್ಲೇ ಹುಟ್ಟಬೇಕು ಎಂಬ ಆಶಯವನ್ನು ಕೋಟಿ ಕೋಟಿ ಕನ್ನಡಾಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
Kshetra Samachara
29/10/2021 09:59 pm