ಹುಬ್ಬಳ್ಳಿ: ಇಲ್ಲಿನ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆಯಲ್ಲಿ (ಕೆಕೆಜಿಎಸ್‌ಎಸ್) ಈ ಬಾರಿ ರಾಷ್ಟ್ರಧ್ವಜಗಳ ಬೇಡಿಕೆ ತುಸು ಚೇತರಿಕೆ ಕಂಡಿದೆ. ಕೋವಿಡ್ ಎರಡನೇ ಅಲೆಯ ಅಬ್ಬರ ತಗ್ಗಿದ ನಂತರ, ಸಂಸ್ಥೆಯ ವಹಿವಾಟು ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ.
ಕೋವಿಡ್ ಮೂರನೇಯ ಅಲೆಯ ಭೀತಿಯಲ್ಲಿಯೂ ಇದುವರೆಗೆ 1.5 ಕೋಟಿ ವಹಿವಾಟು ನಡೆದಿದ್ದು, ಜನವರಿ 26 ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ವಿವಿಧ ಅಳತೆಯ ಧ್ವಜಗಳು ನೀರಿಕ್ಷೆಯ ಮಟ್ಟದಲ್ಲಿ ಅಲ್ಲದಿದ್ದರೂ ಚೇತರಿಕೆಯ ಮಟ್ಟದಲ್ಲಿ ಮಾರಾಟವಾಗಿವೆ. ಕಳೆದ ವರ್ಷ ಕೋವಿಡ್‌ನಿಂದಾಗಿ ವಹಿವಾಟು ಪಾತಾಳಕ್ಕೆ ಕುಸಿದಿತ್ತು. ಕಾರ್ಮಿಕರಿಗೆ ವೇತನ ಪಾವತಿಸಲಾಗದ ಸ್ಥಿತಿ ಒದಗಿ ಬಂದಿತ್ತು.ರಾಷ್ಟ್ರಧ್ವಜ ತಯಾರಿಕೆಗಾಗಿ ಬ್ಯುರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ (ಬಿಐಎಸ್) ಮಾನ್ಯತೆ ಪಡೆದಿರುವ ಏಕೈಕ ಸಂಸ್ಥೆಯಾಗಿದ್ದು, ಧ್ವಜ ಮಾರಾಟದಿಂದಲೇ ವಾರ್ಷಿಕ 3 ಕೋಟಿಗೂ ಹೆಚ್ಚು ಆದಾಯ ಬರುತ್ತಿತ್ತು. ಆದರೆ, ಕಳೆದ ವರ್ಷ ಕೇವಲ 92 ಲಕ್ಷದ ಉತ್ಪನ್ನ ಮಾರಾಟವಾಗಿತ್ತು. ಆದರೇ ಈಗ ಸ್ವಲ್ಪ ಚೇತರಿಕೆ ಕಂಡಿದೆ. ಅಲ್ಲದೇ ದೆಹಲಿ, ಗುಜರಾತ್‌ನಿಂದ ಹೆಚ್ಚಿನ ಬೇಡಿಕೆ ಬಂದಿದ್ದು, ಕೋವಿಡ್‌ನಿಂದಾಗಿ ಬಂದ್ ಆಗಿದ್ದ ಶಿಕ್ಷಣ ಸಂಸ್ಥೆಗಳು, ಈ ಸಲ ತೆರೆದಿವೆ. ದೆಹಲಿಯ ಖಾದಿ ಭಂಡಾರದಿಂದ ಸಂಸತ್ತು ಮತ್ತು ವಿದೇಶಗಳಲ್ಲಿರುವ ಭಾರತದ ರಾಯಭಾರಿ ಕಚೇರಿಗಳಿಗೆ ಧ್ವಜ ಪೂರೈಕೆಯಾಗುತ್ತದೆ.
ಕೋವಿಡ್ ಬಳಿಕ ಸಂಸ್ಥೆಯ ಧ್ವಜದ ವಹಿವಾಟು ಚೇತರಿಕೆಯ ಹಾದಿಯಲ್ಲಿ ಸಾಗುತ್ತಿದೆ. ಅಲ್ಲದೆ, 2022ನೇ ಆಗಸ್ಟ್ 15ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗಲಿದೆ. ಈ ಸಂದರ್ಭವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷವಾಗಿ ಆಚರಿಸುವ ಸಾಧ್ಯತೆ ಇರುವುದರಿಂದ, ತ್ರಿವರ್ಣ ಧ್ವಜಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ. ದಾಖಲೆಯ ವಹಿವಾಟು ನಡೆಯುವ ನಿರೀಕ್ಷೆ ಇದೆ.
-ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
26/01/2022 09:22 am