ಧಾರವಾಡ: ರೈತ ಹೋರಾಟದ ಬಗ್ಗೆ ಪೇಜಾವರ ಸ್ವಾಮೀಜಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಪ್ರತಿಕ್ರಿಯಿಸಿದ್ದಾರೆ. ಸದ್ಯ ಚಳವಳಿ ನಡೆಸುತ್ತಿರುವ ರಾಕೇಶ ಟಿಕಾಯತ್ ಅವರು, ಅವರ ತಂದೆ ಕಾಲದಿಂದಲೂ ಹೋರಾಟದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಹೋರಾಟ ಮಾಡುವವರು ರೈತರಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ. ಈ ಹೇಳಿಕೆ ಹಿಂದೆ ಏನೋ ರಹಸ್ಯ ಇದ್ದು, ಸ್ವಾಮೀಜಿ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಈ ದೇಶದಲ್ಲಿ ಗುಪ್ತಚರ ಇಲಾಖೆ ಇಲ್ಲವೇ ಎಂದು ಅನಿಸುತ್ತಿದೆ. ಒಂದು ವೇಳೆ ಸಮಾಜಘಾತುಕ ಶಕ್ತಿಗಳು ದೆಹಲಿ ಕೃತ್ಯ ಮಾಡಿದ್ದರೆ ಹಿಡಿದು ಜೈಲಿಗೆ ಹಾಕಬೇಕಿತ್ತು. ವಿದೇಶದಲ್ಲಿ ಇದ್ದವರನ್ನೂ ಹಿಡಿದು ಜೈಲಿಗೆ ಹಾಕುತ್ತಾರೆ. ಇಲ್ಲಿ ಧ್ವಜ ಹಾರಿಸಿದವರನ್ನು ಹಿಡಿಯಲು ಆಗುತ್ತಿಲ್ಲವಾ ಎಂದು ಪ್ರಶ್ನಿಸಿದರು.
ಕೃಷಿಯ ಗಂಧ ಗಾಳಿ ಗೊತ್ತಿಲ್ಲದವರೆಲ್ಲ ಈಗ ಮಾತನಾಡುತ್ತಿದ್ದಾರೆ. ಕೃಷಿ ಮಾಡದವರೆಲ್ಲ ಕೃಷಿ ಕಾನೂನು ಬಗ್ಗೆ ಮಾತನಾಡುವ ವಾತಾವರಣ ನಿರ್ಮಾಣವಾಗಿದೆ. ಕೃಷಿಕರನ್ನು, ರೈತ ಮುಖಂಡರನ್ನು ಕರೆದು ಕಾಯ್ದೆ ಬಗ್ಗೆ ಪ್ರಧಾನಿ ಮಾತನಾಡಬೇಕಿತ್ತು. ಅದನ್ನು ಬಿಟ್ಟು ಇತರೆ ಗಣ್ಯ ವ್ಯಕ್ತಿಗಳಿಂದ ಹೇಳಿಕೆ ಕೊಡಿಸಿಕೊಂಡು ಹೋರಾಟದ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
08/02/2021 10:32 am