ಕುಂದಗೋಳ: ಅತಿವೃಷ್ಟಿ ಸುಳಿಗೆ ಸಿಲುಕಿದ ಮುಂಗಾರು ಬೆಳೆಗಳು ರೋಗ ಬಾಧೆಗೆ ತುತ್ತಾಗಿವೆ. ಹೊಲಗಳಲ್ಲಿ ಬೆಳೆಗಳ ಜೊತೆಗೆ ಎದೆ ಎತ್ತರಕ್ಕೆ ಕಳೆ, ಹುಲ್ಲು, ಕಸ ಬೆಳೆದಿದ್ದು ವಿಷ ಜಂತುಗಳ ಹಾವಳಿ ಸಹ ಹೆಚ್ಚಾಗಿದೆ.
ಹೌದು ! ಪ್ರಸಕ್ತ ವರ್ಷದ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದು ಒಂದೆಡೆಯಾದರೇ, ಬೆಳೆಗಳಿಗೆ ಎಡೆಕುಂಟೆ ಹಾಕಲು ರೈತರಿಗೆ ಧೋ ಎಂದು ಸುರಿಯುವ ಮಳೆ ಅವಕಾಶ ಕೊಡದ ಕಾರಣ ಜಮೀನಿನಲ್ಲಿ ಬೆಳೆಗಿಂತ ಅಧಿಕ ಎತ್ತರವಾಗಿ ಕಸ ಬೆಳೆದು ರೈತ ಬೆಳೆ ಉಳಿಸಿಕೊಳ್ಳಲು ಒಕ್ಕಲು ಮಾಡಲು ಕಷ್ಟ ಪಡುತ್ತಿದ್ದಾನೆ.
ಸೋಯಾಬಿನ್, ಉದ್ದು, ಹೆಸರು ಸೇರಿದಂತೆ ಇತರೆ ಬೆಳೆಗಳು ನಾಲ್ಕು ಅಡಿ ಎತ್ತರ ಬೆಳೆದಿದ್ದು ಬೆಳೆಗಳಿಗೆ ಮತ್ತಷ್ಟು ತುಕ್ಕು ರೋಗ, ಕಾಯಿ ಕೊರಗ, ಬೂದು ರೋಗ ಸೇರಿದಂತೆ ಇನ್ನಿತರ ರೋಗಭಾದೆ ಹೆಚ್ಚಾಗಿದೆ. ಕೀಟಭಾದೆ ನಿಯಂತ್ರಣಕ್ಕೆ ಔಷಧಿ ಹಾಗೂ ಹುಲ್ಲಿಗೆ ಕಳೆನಾಶಕ ಸಿಂಪಡಣೆ ಮಾಡಲು ರೈತರಿಗೆ ಸಾಧ್ಯವಾಗುತ್ತಿಲ್ಲ, ಹೀಗಾಗಿ ರೈತ ಬೆಳೆ ಉಳಿಸಿಕೊಳ್ಳಲು ಬಾಡಿಗೆ ಜಾಸ್ತಿ ಆದ್ರೂ ಡ್ರೋನ್ ಬಳಕೆ ಮಾಡುತ್ತಿದ್ದಾನೆ.
ವಿಪರೀತವಾಗಿ ಸುರಿದ ಮಳೆಯಿಂದ ಬೆಳೆಗಳು ರೋಗ ಭಾದೆಗೆ ತುತ್ತಾಗಿದ್ದರೂ ವಿಷ ಜಂತುಗಳ ಹಾವಳಿಯಿಂದ ಕೃಷಿ ಕಾರ್ಮಿಕರು ಔಷಧಿ ಸಿಂಪಡಿಸಲು ಜೀವ ಭಯದಿಂದ ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಕೆಲವಡೆ ರೈತರು ಹಾವು ತುಳಿದು ಪ್ರಾಣಾಪಾಯದಿಂದ ಪಾರಾದ ಘಟನೆಗಳೇ ಇದಕ್ಕೆ ಸಾಕ್ಷಿಯಾಗಿದ್ದು, ಬಾಡಿಗೆ ಹಣ ಹೆಚ್ಚಾದ್ರೂ ರೈತರಿಗೆ ಡ್ರೋನ್ ಅನಿವಾರ್ಯವಾಗಿದೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/08/2022 06:04 pm