ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಏಪ್ರಿಲ್‌ನಲ್ಲಿ ಕೃಷಿ ಜಾತ್ರೆಗೆ ಸಜ್ಜಾದ ಧಾರವಾಡ

ಧಾರವಾಡ: ಕೊರೊನಾದಿಂದ ವಿಳಂಬವಾಗಿರುವ ಧಾರವಾಡ ಕೃಷಿ ಮೇಳವನ್ನು ಏಪ್ರಿಲ್ ತಿಂಗಳಲ್ಲಿ ನಡೆಸಲು ಚಿಂತನೆ ನಡೆಸಲಾಗಿದೆ.

ಕಳೆದ ವರ್ಷ ಜನೆವರಿ ತಿಂಗಳಿನಲ್ಲಿ ಕೃಷಿ ಮೇಳ ಆಯೋಜನೆ ಮಾಡಲಾಗಿತ್ತು. ಈ ವರ್ಷ ಫೆಬ್ರುವರಿ ತಿಂಗಳಿನಲ್ಲಿ ಕೃಷಿ ಮೇಳ ನಡೆಸಬೇಕು ಎನ್ನುವಷ್ಟರಲ್ಲಿ ಕೊರೊನಾ ಮೂರನೇ ಅಲೆ ಬಂದಿದ್ದರಿಂದ ಸರ್ಕಾರದಿಂದ ಇದಕ್ಕೆ ಅನುಮತಿ ಸಿಕ್ಕಿರಲಿಲ್ಲ. ಇದೀಗ ಏಪ್ರಿಲ್ ತಿಂಗಳಿನಲ್ಲಿ ಕೃಷಿ ಮೇಳ ನಡೆಸಲು ಸರ್ಕಾರದಿಂದ ಪರವಾನಿಗಿ ಸಿಕ್ಕಿರುವುದರಿಂದ ಕೃಷಿ ಮೇಳ ನಡೆಸಲು ಕೃಷಿ ವಿಶ್ವವಿದ್ಯಾಲಯ ಸಿದ್ಧತೆ ನಡೆಸಿಕೊಳ್ಳುತ್ತಿದೆ.

ಇತ್ತೀಚಿನ ಹತ್ತು ವರ್ಷಗಳಲ್ಲಿ ಕೃಷಿ ಮೇಳ ವಾಣಿಜ್ಯ ಸ್ವರೂಪ ಪಡೆದುಕೊಳ್ಳುತ್ತಿದೆ. ಕೃಷಿ ಮೇಳದಲ್ಲಿ ಬೀಜ, ಗೊಬ್ಬರ, ಯಂತ್ರೋಪಕರಣಗಳು, ಪ್ರಾಣಿ, ಪಕ್ಷಿಗಳು ಸೇರಿದಂತೆ ಇತ್ಯಾದಿ ಕೃಷಿ ಆವಿಷ್ಕಾರಗಳು ದೇಶ, ವಿದೇಶದಿಂದ ಬಂದು ಇಲ್ಲಿ ಪ್ರದರ್ಶನಗೊಳ್ಳುವುದಷ್ಟೇ ಅಲ್ಲದೇ ಪೈಪೋಟಿ ಕೂಡ ನಡೆಸುತ್ತಿವೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಕೃಷಿ ಮೇಳ ನಿಗದಿತ ಸಮಯಕ್ಕೆ ನಡೆಯದೇ ರೈತರಲ್ಲಿ ಬೇಸರ ಮೂಡಿಸಿತ್ತು. ಬಿತ್ತನೆ ಪೂರ್ವದಲ್ಲಿ ಕೃಷಿ ಮೇಳ ನಡೆದರೆ ಸೂಕ್ತವಾಗುತ್ತದೆ ಎಂಬುದು ರೈತರ ಅಭಿಪ್ರಾಯ. ಇದೀಗ ಮುಂಗಾರು ಬಿತ್ತನೆ ಪೂರ್ವದಲ್ಲೇ ಕೃಷಿ ಮೇಳ ನಡೆಯುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ.

ಧಾರವಾಡ ಕೃಷಿ ಮೇಳ ತನ್ನದೇ ಆದ ಇತಿಹಾಸ ಹೊಂದಿದೆ. 1990 ರಲ್ಲಿ ಕೇವಲ ಒಂದು ಸಾವಿರದಿಂದ ಎರಡು ಸಾವಿರ ಜನರನ್ನೊಳಗೊಂಡು ಆರಂಭವಾದ ಈ ಕೃಷಿ ಮೇಳ ಇದೀಗ ದೊಡ್ಡ ಪ್ರಮಾಣದಲ್ಲಿ ನಡೆಯುತ್ತ ಬಂದು ರೈತರ ಜಾತ್ರೆ ಎಂದೇ ಕರೆಯಿಸಿಕೊಳ್ಳುತ್ತಿದೆ. ಈ ಕೃಷಿ ಮೇಳಕ್ಕೆ ಕೇವಲ ಧಾರವಾಡ ಅಷ್ಟೇ ಅಲ್ಲದೇ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಿಂದಲೂ ರೈತರು ಬಂದು ಇದರ ಸದುಪಯೋಗಪಡಿಸಿಕೊಳ್ಳುತ್ತಾರೆ. ಏನೇ ಆಗಲಿ ಕೋವಿಡ್ ಮೂರನೇ ಅಲೆ ನಂತರ ಇದೀಗ ಕೃಷಿ ವಿಶ್ವವಿದ್ಯಾಲಯ ಕೃಷಿ ಜಾತ್ರೆಗೆ ಮುಂದಾಗಿರುವುದು ರೈತರಲ್ಲಿ ಹರ್ಷವನ್ನುಂಟು ಮಾಡಿದೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ

Edited By : Shivu K
Kshetra Samachara

Kshetra Samachara

25/03/2022 05:30 pm

Cinque Terre

87.76 K

Cinque Terre

5

ಸಂಬಂಧಿತ ಸುದ್ದಿ