ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಬಲ ಬೆಲೆಯಡಿ ಕಡಲೆ ಖರೀದಿ ಕೇಂದ್ರ ಆರಂಭ

ಧಾರವಾಡ: 2021-22 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಕಡಲೆಕಾಳನ್ನು ಪ್ರತಿ ಕ್ವಿಂಟಾಲ್‍ಗೆ ಕೇಂದ್ರ ಸರ್ಕಾರವು ನಿಗದಿಪಡಿಸಿರುವ 5,230 ನಂತೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಧಾರವಾಡ ಜಿಲ್ಲೆಯ ರೈತರಿಂದ ಮಾತ್ರ ಖರೀದಿಸಲು ಸರ್ಕಾರದಿಂದ 19 ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಕಡಲೆ ಬೆಳೆದ ರೈತರು ಜಿಲ್ಲೆಯ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆಗಳ ಮುಖ್ಯ ಹಾಗೂ ಉಪ ಪ್ರಾಂಗಣಗಳಲ್ಲಿ ಆರಂಭಿಸಿರುವ 19 ಖರೀದಿ ಕೇಂದ್ರಗಳಲ್ಲಿ ಫೆ.14 ರಿಂದ ಮುಂದಿನ 45 ದಿನಗಳವರೆಗೆ ನೋಂದಣಿ ಮಾಡಿಸಿಕೊಳ್ಳಬಹುದು. ಮತ್ತು ಫೆ. 14 ರಿಂದ 90 ದಿನಗಳವರೆಗೆ ರೈತರಿಂದ ಕಡಲೆಕಾಳುಗಳನ್ನು ಇದೇ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ಖರೀದಿಸಲಾಗುತ್ತದೆ.

ಪ್ರತಿ ರೈತರಿಂದ ಪ್ರತಿ ಎಕರೆಗೆ ಗರಿಷ್ಠ 4 ಕ್ವಿಂಟಾಲ್‍ನಂತೆ ಹಾಗೂ ಪ್ರತಿ ರೈತರಿಂದ ಗರಿಷ್ಟ 15 ಕ್ವಿಂಟಾಲ್ ಎಫ್‍ಎಕ್ಯೂ ಗುಣಮಟ್ಟದ ಕಡಲೆಕಾಳನ್ನು ಖರೀದಿಸಲಾಗುತ್ತದೆ.

ರೈತರು ಯಾವುದೇ ಸಂದರ್ಭದಲ್ಲಿ ಮಧ್ಯವರ್ತಿಗಳ ಮೊರೆ ಹೋಗಬಾರದು. ಇದರ ಉಪಯೋಗವನ್ನು ರೈತರೇ ನೇರವಾಗಿ ಪಡೆಯಬೇಕು. ಸಮಸ್ಯೆಗಳಿದ್ದಲ್ಲಿ ಧಾರವಾಡ, ಹುಬ್ಬಳ್ಳಿ, ಕುಂದಗೋಳ ಮತ್ತು ಅಣ್ಣಿಗೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಹಾಗೂ ಶಾಖಾ ವ್ಯವಸ್ಥಾಪಕರನ್ನು (9449864419) ಸಂಪರ್ಕಿಸಬಹುದು ಎಂದು ಜಿಲ್ಲಾ ಟಾಸ್ಕ್‍ಪೋರ್ಸ್ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ತಿಳಿಸಿದ್ದಾರೆ.

ನೋಂದಣಿಗೆ ಅಗತ್ಯವಿರುವ ದಾಖಲೆಗಳು: ನೋಂದಣಿಗೆ ಆಗಮಿಸುವ ರೈತರು ತಮ್ಮ ಆಧಾರ ಗುರುತಿನ ಚೀಟಿಯ ಮೂಲ ಪ್ರತಿ ಹಾಗೂ ಅದರ ನಕಲು ಪ್ರತಿ, 2021-22 ನೇ ಸಾಲಿನ ಪಹಣಿ ಪತ್ರ ಮತ್ತು ಸದರಿ ಪಹಣಿ ಪತ್ರದಲ್ಲಿ ಕಡಲೆಕಾಳು ಬೆಳೆದಿರುವ ಬಗ್ಗೆ ನಮೂದಾಗಿರಬೇಕು. ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿಗಳಿಂದ ಕಡಲೆಕಾಳು ಬೆಳೆದ ಬಗ್ಗೆ ಧೃಢೀಕರಣ ಪತ್ರ, ಪಹಣಿ ಪತ್ರಿಕೆಯಲ್ಲಿರುವ ಹೆಸರಿನ ರೈತರ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆ ಪಾಸ್ ಪುಸ್ತಕದ ನಕಲು ಪ್ರತಿ ಸೇರಿದಂತೆ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕು.

ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ. ಗುಣಮಟ್ಟದ ಕಡಲೆಕಾಳು ಉತ್ಪನ್ನವನ್ನು ಖರೀದಿಸಲು ಅನುಸರಿಸುವ ಕ್ರಮಗಳು: ಕಡಲೆಕಾಳು ಉತ್ಪನ್ನದ ಎಫ್.ಎ.ಕ್ಯೂ ಗುಣಮಟ್ಟ ಅಂದರೆ ಚೆನ್ನಾಗಿ ಒಣಗಿರಬೇಕು, ತೇವಾಂಶವು ಶೇ.14 ಕ್ಕಿಂತ ಕಡಿಮೆ ಇರಬೇಕು, ಕಡಲೆಕಾಳು ಉತ್ಪನ್ನವು ಗುಣಮಟ್ಟದ ಗಾತ್ರ, ಬಣ್ಣ ಮತ್ತು ಆಕಾರವನ್ನು ಹೊಂದಿರಬೇಕು, ಗಟ್ಟಿಯಾಗಿರಬೇಕು ಮತ್ತು ಮಣ್ಣಿನಿಂದ ಬೇರ್ಪಡಿಸಲ್ಪಟ್ಟು ಸ್ವಚ್ಛವಾಗಿರಬೇಕು, ಸಾಣಿಗೆಯಿಂದ ಸ್ವಚ್ಛಗೊಳಿಸಿರಬೇಕು. ಕ್ರಿಮಿಕೀಟಗಳಿಂದ ಮುಕ್ತವಾಗಿರಬೇಕು. ಪ್ರತಿ ರೈತರಿಂದ ಎಕರೆಗೆ 4 ಕ್ವಿಂಟಲ್ ಹಾಗೂ ಗರಿಷ್ಟ 15 (ಹದಿನೈದು) ಕ್ವಿಂಟಾಲ್ ಪ್ರಮಾಣದ ಎಫ್‍ಎಕ್ಯೂ ಗುಣಮಟ್ಟದ ಕಡಲೆಕಾಳನ್ನು ಖರೀದಿಸಲಾಗುವುದು. ಸರ್ಕಾರದ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್‍ಗೆ ರೂ.5,230 ರಂತೆ ಖರೀದಿಸಲಾಗುವುದು. ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಸಮಯ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಮಾತ್ರ ಖರೀದಿಸಲಾಗುವುದು.

ಖರೀದಿ ಕೇಂದ್ರಗಳು: ಹುಬ್ಬಳ್ಳಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣ ಹಾಗೂ ನೂಲ್ವಿ, ಹೆಬಸೂರು, ಕೋಳಿವಾಡ, ಬ್ಯಾಹಟ್ಟಿ ಉಪ ಮಾರುಕಟ್ಟೆ ಪ್ರಾಂಗಣಗಳು ಮತ್ತು ಧಾರವಾಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣ ಹಾಗೂ ಹೆಬ್ಬಳ್ಳಿ, ಉಪ್ಪಿನ ಬೆಟಗೇರಿ ಉಪ ಮಾರುಕಟ್ಟೆ ಮತ್ತು ಅಣ್ಣಿಗೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣ, ಅಣ್ಣಿಗೇರಿ ಎಫ್‍ಪಿಓ, ನವಲಗುಂದ ಉಪಮಾರುಕಟ್ಟೆ ಪ್ರಾಂಗಣ, ನವಲಗುಂದ ಶ್ರೀವಾರಿ ಫ್ಲೋರ್ ಮಿಲ್, ತಿರ್ಲಾಪುರ, ಮೊರಬ ಪಿಕೆಪಿಎಸ್ ಮತ್ತು ಎಫ್‍ಪಿಓ ಉಪಮಾರುಕಟ್ಟೆ ಪ್ರಾಂಗಣ ಮತ್ತು ಕುಂದಗೋಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣ ಹಾಗೂ ಯರಗುಪ್ಪಿ, ಯಲಿವಾಳ ಮತ್ತು ಯರೇಬೂದಿಹಾಳ ಕೇಂದ್ರಗಳಲ್ಲಿ ಕಡಲೆಕಾಳುಗಳನ್ನು ರೈತರಿಂದ ಖರೀದಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

15/02/2022 10:36 pm

Cinque Terre

9.11 K

Cinque Terre

0

ಸಂಬಂಧಿತ ಸುದ್ದಿ