ನವಲಗುಂದ : ನಾಲ್ಕು ಅಕ್ಷರ ಕಲಿತ್ರೇ ಸಾಕು, ಕೈಯಲ್ಲಿ ಮಾರ್ಕ್ಸ್ ಕಾರ್ಡ್ ಹಿಡಿದು ದೂರದ ಸಿಟಿಯಲ್ಲಿ ಉದ್ಯೋಗ ಅರಸುವವರ ನಡುವೆ ಇಲ್ಲೋಬ್ಬ ಯುವಕ ಬಿ.ಟೆಕ್ ಮೆಕ್ಯಾನಿಕಲ್ ಪದವಿ ಓದಿದ್ರೂ ಕೂಡಾ ಕೃಷಿಯಲ್ಲೇ ಖುಷಿಯಾಗಿ ಹಳ್ಳಿಯಲ್ಲೇ ಹಮ್ಮಿರನಾಗಿದ್ದಾನೆ.
ನಾವು ಹೇಳುತ್ತಿರುವ ಕೃಷಿ ಸ್ಟೋರಿ ನಾಯಕನೇ ಈ ಚನ್ನಬಸಪ್ಪ ಹೊಂಡೇದ್. ನವಲಗುಂದ ತಾಲೂಕಿನ ಶಾನವಾಡ ಗ್ರಾಮದ ಪದವೀಧರ ರೈತ. ತಮ್ಮ 20 ಎಕರೆ ಭೂಮಿಯಲ್ಲಿ ಕೃಷಿಹೊಂಡ ಆಶ್ರೀತ ಬೇಸಾಯದ ಮೂಲಕ ವಾರ್ಷಿಕ ಬರೋಬ್ಬರಿ 20 ಲಕ್ಷ ಆದಾಯ ಗಳಿಸಿದ್ದಾರೆ.
ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ 400/250 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡ ಇವರು ಪ್ರಮುಖವಾಗಿ ರೇಷ್ಮೆ ಬೆಳೆಗೆ ಪ್ರಾಮುಖ್ಯತೆ ನೀಡಿ 7 ಎಕರೆ ರೇಷ್ಮೆ ಕೃಷಿ ಜೊತೆಗೆ ಕಬ್ಬು, ಹೆಸರು, ಗೋವಿನಜೋಳ, ಈರುಳ್ಳಿ, ಹಾಗೂ ಹಿಂಗಾರು ಗೋಧಿ, ಕಡಲೆ ಬೆಳೆ ಬೆಳೆದು ಲಕ್ಷ ಲಕ್ಷ ಆದಾಯದ ಮಾರ್ಗವನ್ನು ಅಲಕ್ಷ್ಯ ಮಾಡದೇ ತಮ್ಮದಾಗಿಸಿಕೊಂಡಿದ್ದಾರೆ.
ಕೇವಲ ಕೃಷಿಯಲ್ಲಿ ಯಶಸ್ಸಲ್ಲದೆ ಹೈನುಗಾರಿಕೆಯನ್ನು ಮಾಡುತ್ತಿರುವ ಇವರು, ನಿತ್ಯ 6 ಆಕಳು ಕರ್ತವ್ಯ ಪಾಲನೆ ಜೊತೆ ಇಂಧನ ಬೆಲೆ ಗಗನ ಮುಟ್ಟಿದ ಆಧುನಿಕ ಯುಗದಲ್ಲಿ ಗೋಬರ್ ಗ್ಯಾಸ್ ಮೂಲಕ ತಮ್ಮ ಕುಟುಂಬದ ಒಲೆ ಹೊತ್ತಿಸಿ ಅಡುಗೆ ಬೇಯಿಸಿ ನೈಸರ್ಗಿಕ ಅನಿಲ ಬಳಕೆ ಜೊತೆ ವಾಯುಮಾಲಿನ್ಯಕ್ಕೆ ತಡೆ ಒಡ್ಡಿದ್ದಾರೆ.
ಇನ್ನೂ ಮುಖ್ಯವಾಗಿ ತಮ್ಮೂರಿನ ಯುವಕರಿಗೆ ತಮ್ಮ ಜಮೀನಿನಲ್ಲೇ ಕೃಷಿಯಲ್ಲಿ ಉದ್ಯೋಗ ನೀಡುವ ಆಶ್ವಾಸನೆ ಹೊಂದಿರುವ ಇವರು, ಕೋಟಿ ವಿಧ್ಯೆ ಕಲಿತರು ಅದರಲ್ಲಿ ಮೇಟಿ ವಿದ್ಯೆ ಮೇಲು ಎಂಬುದನ್ನು ಸಾಬೀತು ಮಾಡಿ ತಮ್ಮ ಬಿ.ಟೆಕ್ ಮೆಕ್ಯಾನಿಕಲ್ ಪದವಿ ಜ್ಞಾನವನ್ನು ಕೃಷಿಯಲ್ಲಿ ನಾನಾ ಪ್ರಯೋಗಕ್ಕೆ ಉಪಯೋಗಿಸುತ್ತಿದ್ದಾರೆ.
ಒಟ್ಟಾರೆ ಮಣ್ಣಿನ ಮಗ ಮಣ್ಣಲ್ಲೇ ಬೆಳೆ ಬೆಳೆದು ಬದುಕು ಕಟ್ಟಿಕೊಳ್ಳುತ್ತಾ ಅದೆಷ್ಟೋ ಯುವಕರಿಗೆ ಈ ಥರ್ಟಿ ಪ್ಲಸ್ ಒನ್ ವಯಸ್ಸಿನ ಯಂಗಸ್ಟರ್ ಸ್ಫೂರ್ತಿ ಚಿಲುಮೆ ಎಂದ್ರೇ ತಪ್ಪಾಗಲಾರದು.
Kshetra Samachara
27/10/2021 02:47 pm