ಧಾರವಾಡ: 2019-20ನೇ ಸಾಲಿನಲ್ಲಿ ನ್ಯಾಪೆಡ್ ಕಂಪೆನಿ ಮೂಲಕ ರಾಜ್ಯ ಸರ್ಕಾರ ರೈತರಿಂದ ಬೆಂಬಲ ಬೆಲೆಯಡಿ ಖರೀದಿ ಮಾಡಿದ್ದ ಕಡಲೆ ಉಗ್ರಾಣದಲ್ಲೇ ಸ್ಟಾಕ್ ಆಗಿದ್ದು, ಅವುಗಳಿಗೆ ಹುಳು ಹಿಡಿದಿರುವ ವಿಷಯ ಬೆಳಕಿಗೆ ಬಂದಿದೆ.
ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್ ಕಡಲೆಗೆ 4,820 ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡಿ ರೈತರಿಂದ ಕಡಲೆ ಖರೀದಿ ಮಾಡಿತ್ತು. ಕಳೆದ 20 ತಿಂಗಳಿನಿಂದ ಈ ಕಡಲೆ ಉಗ್ರಾಣದಲ್ಲೇ ಸ್ಟಾಕ್ ಆಗಿದ್ದು, ಕಡಲೆಯನ್ನು ಹುಳುಗಳು ಮೇಯುತ್ತಿವೆ. ಧಾರವಾಡ ಉಗ್ರಾಣದಲ್ಲಿ ಒಟ್ಟು 3,330 ಮೆಟ್ರಿಕ್ ಟನ್, ಗದಗ ಉಗ್ರಾಣದಲ್ಲಿ 10,060 ಹಾಗೂ ಬೈಲಹೊಂಗಲ ಉಗ್ರಾಣದಲ್ಲಿ 4,880 ಮೆಟ್ರಿಕ್ ಟನ್ ಸೇರಿದಂತೆ ಒಟ್ಟು 20 ಸಾವಿರಕ್ಕೂ ಅಧಿಕ ಮೆಟ್ರಿಕ್ ಟನ್ ಕಡಲೆಯನ್ನು ದಾಸ್ತಾನು ಮಾಡಲಾಗಿದೆ.
ಸದ್ಯ ಹಿಂಗಾರು ಬಿತ್ತನೆಗೆ ಕಡಲೆ ಬೀಜ ಬೇಕಾಗಿದ್ದು, ರೈತರು ಕಡಲೆ ಬಿತ್ತನೆ ಕಾರ್ಯ ನಡೆಸಿದ್ದಾರೆ. ರಾಜ್ಯ ಸರ್ಕಾರ ನ್ಯಾಪೆಡ್ ಕಂಪೆನಿ ಮೂಲಕ ಬೆಂಬಲ ಬೆಲೆಯಡಿ ಕಡಲೆ ಖರೀದಿ ಮಾಡಿತ್ತು. ಬೀಜ ಮಾರಾಟ ಮಾಡುವಂತೆ ಈಗಾಗಲೇ ರಾಜ್ಯ ಉಗ್ರಾಣ ಕೇಂದ್ರದಿಂದ 15 ಬಾರಿ ಸಂಬಂಧಿಸಿದ ಕಂಪೆನಿಗೆ ನೋಟಿಸ್ ಜಾರಿ ಮಾಡಿದ್ದರೂ ಕಂಪೆನಿ ಮಾತ್ರ ಕ್ಯಾರೆ ಎಂದಿಲ್ಲ. ರೈತರು ಬೀಜಕ್ಕಾಗಿ ಪರಿತಪಿಸುತ್ತಿರುವಾಗ ಸಾವಿರಾರು ಮೆಟ್ರಿಕ್ ಟನ್ ಕಡಲೆ ಬೀಜ ಉಗ್ರಾಣದಲ್ಲಿ ಹುಳು ಹಿಡಿಯುತ್ತಿದೆ. ಕೂಡಲೇ ಕೃಷಿ ಸಚಿವರು ಹಾಗೂ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
Kshetra Samachara
12/10/2021 06:31 pm