ನವಲಗುಂದ: ಮಣ್ಣಿಂದಲೇ ಚಿನ್ನ, ಮಣ್ಣಿಂದಲೇ ಅನ್ನ. ಮಣ್ಣಿನಿಂದಲೇ ಊಟ, ಮಣ್ಣು ಕಲಿಸುವುದು ಶ್ರಮದ ಪಾಠ. ಫಲವತ್ತಾದ ಮಣ್ಣು, ಈ ಜಗದ ಕಣ್ಣು. ಇದರಿಂದ ಮಾತ್ರ ಸಿಗುತ್ತೆ ಆಹಾರವೆಂಬ ಹೊನ್ನು.
ಅನ್ನದಾತರಿಗಿಂತ ನಿಜಸುಖಿ, ನಿತ್ಯಸುಖಿ ಮತ್ತೊಬ್ಬರಿಲ್ಲ. ಮುತ್ತಿಗೆ ಹಾಕಲಿ ಸೈನಿಕರೆಲ್ಲ, ಬಿತ್ತುಳುವುದನವ ಬಿಡುವುದೇ ಇಲ್ಲ. ವಿಶ್ವಮಾನವ ಕುವೆಂಪು ಅವರ ಈ ರೈತ ಗೀತೆ ನಮ್ಮ ನೆಲದ ಅನ್ನದಾತನ ತ್ಯಾಗಬದ್ಧ ಜೀವನದ ಮಹತ್ವ ಸಾರುತ್ತೆ. ಈ ಮಾತಿನಂತೆ ಬದುಕುತ್ತಿರುವ ಹಸನಾದ ಫಸಲು ಬೆಳೆಯುವ ರೈತ ಇಲ್ಲಿದ್ದಾರೆ ನೋಡಿ.
ಅಂದ್ ಹಾಗೆ ಇವರು ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಇಬ್ರಾಹಿಂಪುರ ಗ್ರಾಮದ ಅನ್ನದಾತ. ತಮ್ಮ 8 ಎಕರೆ ಜಮೀನಿನಲ್ಲಿ ಸಹಜ ಕೃಷಿ ಮಾಡ್ತಾ ಇರುವ ಹೇಮರೆಡ್ಡಿ ಕುರಹಟ್ಟಿ ಅವರು ಮಳೆ ಇಲ್ಲದ ಹಿಂಗಾರು ಹಂಗಾಮಿನಲ್ಲೂ ಹೊಲದ ತುಂಬಾ ಹಸಿರಿನ ಸಿರಿ ಬೆಳೆಯುತ್ತಾರೆ. ಚಂದದ ತೆನೆ ತಲೆ ಎತ್ತಿ ನಿಂತ ಜೋಳ, ಮೆಕ್ಕೆಜೋಳವನ್ನೂ ಬೆಳೆಯುತ್ತಾರೆ. ಯಾವುದೇ ಬೋರ್ ವೆಲ್ ನೀರಿಲ್ಲದೇ ಕೃಷಿ ಮಾಡುತ್ತಿರುವ ವರ್ಷಕ್ಕೆ ಎರಡೂವರೆ ಲಕ್ಷ ಆದಾಯ ತೆಗೆಯುತ್ತಿದ್ದಾರೆ. ಕೇವಲ ಒಣ ಬೇಸಾಯದಲ್ಲಿ ಇದೆಲ್ಲ ಹೇಗಪ್ಪ ಸಾಧ್ಯ ಅಂತ ನಿಮ್ಮಲ್ಲಿ ಕುತೂಹಲ ಮೂಡಿರಬಹುದು ಅಲ್ವಾ?
ಈ ಎಲ್ಲ ಸಾಧನೆಯ ಹಿಂದಿನ ಮಾರ್ಗದರ್ಶಕ ಅಂದ್ರೆ..ಅದುವೇ ದೇಶಪಾಂಡೆ ಫೌಂಡೇಶನ್. ಪಕ್ಕಾ ಬಯಲು ಸೀಮೆ ಪ್ರದೇಶದಲ್ಲಿ ಉತ್ತಮ ಫಸಲು ಪಡೆಯಬೇಕೆಂದು ಸಂಕಲ್ಪ ಮಾಡಿದ ರೈತ ಹೇಮರೆಡ್ಡಿ ಅವರು ತಮ್ಮ ಸ್ನೇಹಿತರ ಮೂಲಕ ದೇಶಪಾಂಡೆ ಫೌಂಡೇಶನ್ ಕೃಷಿಹೊಂಡ ಯೋಜನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಕೃಷಿಹೊಂಡ ನಿರ್ಮಿಸಿಕೊಂಡು ಉತ್ತಮ ಇಳುವರಿ ಪಡೆದು ಲಕ್ಷ ಲಕ್ಷ ಆದಾಯ ಪಡೆದ ರೈತರ ಬಗ್ಗೆಯೂ ತಿಳಿದುಕೊಂಡಿದ್ದಾರೆ. ನಂತರ ದೇಶಪಾಂಡೆ ಫೌಂಡೇಶನ್ ನೆರವಿನಿಂದ ಹೇಮರೆಡ್ಡಿ ಅವರು ತಾವೂ ಕೂಡ ತಮ್ಮ ಹೊಲದಲ್ಲಿ ಕೃಷಿಹೊಂಡ ನಿರ್ಮಿಸಿಕೊಂಡು ಬಂಗಾರದ ಬೆಳೆ ಬೆಳೆಯುತ್ತಿದ್ದಾರೆ. ವರ್ಷಕ್ಕೆ ಮೂರುವರೆ ಲಕ್ಷ ಆದಾಯ ಪಡೆಯುತ್ತಿದ್ದಾರೆ.
ಕೃಷಿಹೊಂಡ ನಿರ್ಮಾಣಕ್ಕೂ ಮುಂಚೆ ಹೇಮರೆಡ್ಡಿ ಅವರು ಹೆಸರು, ಜೋಳ ಬೆಳೆಯುತ್ತಿದ್ರು. ಕೃಷಿಹೊಂಡ ನಿರ್ಮಿಸಿಕೊಂಡ ನಂತರ ಉಳ್ಳಾಗಡ್ಡಿ, ಹೆಸರು, ಮೆಣಸಿನಕಾಯಿ ಗೋಧಿ ಹಾಗೂ ಜೋಳ ಬೆಳೆದು ಗುಣಮಟ್ಟ ಹಾಗೂ ಇಳುವರಿ ಪ್ರಮಾಣ ಹೆಚ್ಚಿಸಿಕೊಂಡಿದ್ದಾರೆ. ಈ ಮೂಲಕ ತಮ್ಮ ನೆರೆ ಹೊರೆಯ ರೈತರಿಗೆ ಮಾದರಿಯಾಗಿದ್ದಾರೆ.
ಇದಿಷ್ಟೇ ಅಲ್ಲ. ಪಾರ್ಮರ್ ಪ್ರೊಡಕ್ಷನ್ ಆರ್ಗನೈಸೇಷನ್ ಕಲ್ಮೇಶ್ವರ ಸಂಘದಿಂದ ಹೇಮರೆಡ್ಡಿ ಅವರು ರೈತರಿಗೆ ಸಕಾಲಕ್ಕೆ ಬೀಜ, ಗೊಬ್ಬರ ಒದಗಿಸುವ ಕೆಲಸ ಮಾಡ್ತಿದ್ದಾರೆ. ಈ ಮೂಲಕ ಇಬ್ರಾಹಿಂಪುರ ಗ್ರಾಮದಲ್ಲಿ ಒಬ್ಬ ಪ್ರಗತಿಪರ ರೈತ ಎನಿಸಿಕೊಂಡಿದ್ದಾರೆ.
ಸಾವಯವಕ್ಕೆ ಸಾವಿಲ್ಲ. ಹೈಬ್ರಿಡ್ ಹೊಂದಿಕೊಂಡವರಿಲ್ಲ ಎಂಬ ಮಾತಿನಂತೆ ಪರಂಪರಾಗತ ಕೃಷಿ ಮಾಡುತ್ತಿರುವ ಹೇಮರೆಡ್ಡಿ ಅವರು ಆದರ್ಶಪರ ಅನ್ನದಾತ ಎನಿಸಿಕೊಂಡಿದ್ದಾರೆ.
Kshetra Samachara
10/02/2021 07:00 pm