ವರದಿ :ಈರಣ್ಣ ವಾಲಿಕಾರ
ಹುಬ್ಬಳ್ಳಿ: ಜಿಲ್ಲೆಯಲ್ಲಿ ಮೆಣಸಿನಕಾಯಿ ಕಟಾವು ಆರಂಭವಾಗಿದ್ದು, ಇಳುವರಿ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಇನ್ನೊಂದೆಡೆ ಇಳುವರಿ ಕಡಿಮೆಯಾಗಿರುವುದರಿಂದ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಿದ್ದು, ಗ್ರಾಹಕರಿಗೂ ಒಣಮೆಣಸಿನಕಾಯಿ ಘಾಟು ತಟ್ಟಿದಂತಾಗಿದೆ.
ಧಾರವಾಡ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಯಲ್ಲಿ ಮೆಣಸಿನಕಾಯಿ ಪ್ರಮುಖ ವಾಣಿಜ್ಯ ಬೆಳೆ. ಈ ಬಾರಿ ಅತಿವೃಷ್ಟಿಯಿಂದ ಇಳುವರಿ ಗಣನೀಯವಾಗಿ ಕುಸಿದಿದೆ. ಎಕರೆಗೆ 4 ರಿಂದ 5 ಕ್ವಿಂಟಲ್ ಇಳುವರಿ ಬರುತಿತ್ತು. ಆದರೆ ಈ ಬಾರಿ ಮಳೆಯಿಂದಾಗಿ ಎಕರೆಗೆ 50 ಕೆ.ಜಿ ಇಳುವರಿ ಬಂದರೆ ಅದೇ ಹೆಚ್ಚು. ಮಳೆ ಕೊರತೆಯ ಜೊತೆಗೆ ಬೆಳೆಗೆ ಬೂದಿ ರೋಗ, ಎಲೆ ಮುಟುರು ರೋಗ ಕಾಣಿಸಿಕೊಂಡಿದ್ದು ಕಾಯಿಯ ಗುಣಮಟ್ಟವೂ ಗಣನೀಯವಾಗಿ ತಗ್ಗಿದ್ದು ರೈತರಲ್ಲಿ ಆತಂಕ ಮೂಡಿದೆ.
ಇನ್ನೂ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಸುರಿದ ಮುಂಗಾರು ಮಳೆಯಿಂದ, ಎಕರೆಗೆ ಸರಾಸರಿ 50 ಕೆ.ಜಿ ಇಳುವರಿಯೂ ಬಂದಿಲ್ಲ ರೈತ ಹಾಕಿದ ಬಂಡವಾಳವೂ ಕೈಗೆ ಬಾರದಂತಾಗಿದೆ. 'ಕೆಂಪು ಬಂಗಾರ' ಎಂದೇ ಹೆಸರಾದ ಮೆಣಸಿನಕಾಯಿ ರೈತರಿಗೆ ಹೆಚ್ಚಿನ ಆದಾಯ ತಂದು ಕೊಡುವ ಬೆಳೆ. ಹೀಗಾಗಿ ಹೆಚ್ಚಿನ ರೈತರು ಮೆಣಸಿನಕಾಯಿ ಬೆಳೆಯಲು ಆಸಕ್ತಿ ತೋರಿಸುತ್ತಾರೆ. ಮುಂಗಾರಿನಲ್ಲಿ ಹೆಸರು ಬೆಳೆ ಕೈಕೊಟ್ಟರೆ, ಅದನ್ನು ಮೆಣಸಿನಕಾಯಿ ಮತ್ತು ಕಡಲೆ ಬೆಳೆದು ಸರಿದೂಗಿಸಿಕೊಳ್ಳುತ್ತಾರೆ. ಉತ್ತಮ ಮಳೆ ಲಭಿಸಿದರೆ ಮೆಣಸಿನಕಾಯಿಯಿಂದ ಬಂಪರ್ ಲಾಭ ಲಭಿಸುತ್ತದೆ. ಈ ಬೆಳೆಯನ್ನೇ ನೆಚ್ಚಿಕೊಂಡು ಅನೇಕ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವ ಯೋಜನೆ ಹಾಕಿಕೊಂಡಿರುತ್ತಾರೆ. ಆದರೆ ಈ ಬಾರಿ ಮಳೆಯಿಂದಾಗಿ ಮೆಣಸಿನಕಾಯಿ ಬೆಳೆ ಹಾನಿಯಾಗಿದ್ದು, ರೈತರ ಆಸೆಗೆ ತಣ್ಣೀರು ಎರಚಿದೆ ಉಳಿದ ಬೆಳೆಯನ್ನು ಕಟಾವು ಮಾಡುವ ಮುನ್ನವೇ ಮತ್ತೆ ಮಳೆ ಆರಂಭಿಸಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಒಟ್ಟಿನಲ್ಲಿ ಕೆಂಪು ಬಂಗಾರದ ಬೆಲೆ ಗಗನಕ್ಕೇರಿದ್ದು, ರೈತರಲ್ಲಿ ಸಂತಸ ಜೊತೆಗೆ ಇಳುವರಿ ಬಾರದೇ ಇರುವುದೆ ದೊಡ್ಡ ತಲೆನೋವು ಆಗಿದೆ. ಆದ್ದರಿಂದ ಸರಕಾರ ಆದಷ್ಟು ಬೇಗ ರೈತರ ಸಮಸ್ಯೆ ಸ್ಪಂದಿಸುವ ಮೂಲಕ ರೈತರ ಕೈ ಹಿಡಿಯಬೇಕೆಂಬುವುದು ಎಲ್ಲರ ಅಭಿಪ್ರಾಯ.
Kshetra Samachara
09/01/2021 04:30 pm