ಹುಬ್ಬಳ್ಳಿ: ನಿರಂತರ ಮಳೆಯಿಂದ ಅನ್ನದಾತ ಬೆಳೆದ ಬೆಳೆಗಳೆಲ್ಲವೂ ಹಾನಿಗೊಳಗಾಗಿದ್ದವು. ಸಾಲಸೋಲ ಮಾಡಿ ಬೆಳೆದ ಬೆಳೆ ಕಳೆದುಕೊಂಡು ರೈತ ಕಂಗಾಲಾಗಿದ್ದ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನೋ ನೋವು ಒಂದು ಕೆಡಯಾದರೆ, ಇತ್ತ ಬೆಳೆಗಳಿಗೆ ಕಟ್ಟಿದ ವಿಮೆ ಹಣವೂ ಕೂಡ ಸರಿಯಾಗಿ ದೊರೆತಿರಲಿಲ್ಲ.
ಆದರೆ ವಿಮಾ ಕಂಪನಿಗಳ ವಿರುದ್ಧದ ರೈತ ಸಂಘದ ನಿರಂತರ ಹೋರಾಟಕ್ಕೆ ಫಲ ಸಿಕ್ಕಿದೆ. ಅದರಲ್ಲೂ ಕೇಂದ್ರ, ರಾಜ್ಯ ಸರ್ಕಾರದ ರೈತಪರ ನಿರ್ಣಯಗಳಿಂದ ಧಾರವಾಡ ಜಿಲ್ಲೆಗೆ 77 ಕೋಟಿ ರೂ. ಪರಿಹಾರ ಹರಿದು ಬರುತ್ತಿದ್ದು ಜಿಲ್ಲೆಯ ರೈತರಲ್ಲಿ ಸಂತಸ ಮೂಡಿಸಿದೆ.
ಧಾರವಾಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ರೈತ ಬೆಳೆದ ಬೆಳೆಗಳಷ್ಟೇ ಅಲ್ಲದೇ, ಅನ್ನದಾತನ ಬದುಕೇ ಕೊಚ್ಚಿ ಹೋಗಿತ್ತು. ಸಾಲ ಮಾಡಿ ಗೊಬ್ಬರ, ಬೀಜ ಹಾಕಿ ಬೆಳೆದಿದ್ದ ಬೆಳೆಗಳನ್ನು, ರೈತ ಕಳೆದುಕೊಂಡು ಬೀದಿಗೆ ಬಂದಿದ್ದಾನೆ.
ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ನೀಡುವ ಪರಿಹಾರಿವೂ ಸರಿಯಾಗಿ ದೊರೆಯುತ್ತಿಲ್ಲ. ಇತ್ತ 2019ರ ಸಾಲಿನ ಮುಂಗಾರು ಬೆಳೆಗೆ ಕಟ್ಟಿದ ವಿಮಾ ಹಣವೂ ರೈತರಿಗೆ ಸಿಗುತ್ತಿಲ್ಲ. ಇದರಿಂದಾಗಿ ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ರೈತ ಸಂಘಟನೆಗಳು ನಿರಂತರ ಹೋರಾಟ ಮಾಡಿ, ವಿಮೆ ಹಣವನ್ನು ನೀಡುವಂತೆ ಒತ್ತಾಯಿಸಿದ್ದವು. ಹೀಗಾಗಿ ರಾಜ್ಯ ಸರ್ಕಾರ ಮಧ್ಯಂತರ ಪರಿಹಾರ ನೀಡುವಂತೆ ಆಗ್ರಹಿಸಿತ್ತು.
ಆದರೆ, ಭಾರತಿ ಎಕ್ಸಾ ಇನ್ಸುರೇನ್ಸ ಕಂಪನಿ ರಾಜ್ಯ ಸರ್ಕಾರ ಪರಿಹಾರವನ್ನು ಒದಗಿಸುವಂತೆ ನಿರ್ಣಯಿಸಿದ್ದನ್ನು ಪ್ರಶ್ನಿಸಿ, ಮನವಿ ಸಲ್ಲಿಸಿದ್ದ ಅರ್ಜಿಯನ್ನು ಕೃಷಿ ಮಂತ್ರಾಲಯದ ಹೆಚ್ಚುವರಿ ಕಾರ್ಯದರ್ಶಿಗಳು ವಜಾಗಳಿಸಿದ್ದಾರೆ. ಇದರಿಂದ ಜಿಲ್ಲೆಯ ರೈತರಿಗೆ 2019ರ ಬೆಳೆವಿಮೆ ದೊರೆಯಲಿದ್ದು, ರೈತರು ಇದರಿಂದ ಸಂತಸಗೊಂಡಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಬೆಳೆಗಳಾದ ಹತ್ತಿ, ಹೆಸರು, ಸೋಯಾಬಿನ್, ಮೆಣಸಿನಕಾಯಿ ಸೇರಿದಂತೆ ಹಲವು ಬೆಳೆಗಳೆಲ್ಲವೂ ಮಳೆಯ ನೀರಿನಲ್ಲಿ ಕೊಳೆತು ಹೋಗಿದ್ದವು. ಹೀಗಾಗಿ ರೈತರು ಬೆಳೆಗಳಿಗೆ ಭಾರತಿ ಎಕ್ಸಾ ಕಂಪನಿಗೆ ವಿಮೆ ಮಾಡಿಸಿದ್ದರು.
ಆದ್ರೆ, ರೈತರಿಗೆ ಬೆಳೆ ವಿಮೆ ನೀಡಬೇಕಾದ ಭಾರತಿ ಎಕ್ಸಾ ಕಂಪನಿ, ಬೆಳೆ ಸರ್ವೆ ಮಾಡಿ ಕೇವಲ ಏಳು ಕೋಟಿ ರೂಪಾಯಿ ಬೆಳೆವಿಮೆ ನೀಡಲು ಮುಂದಾಗಿತ್ತು. ಕೇಂದ್ರ, ರಾಜ್ಯ ಸರ್ಕಾರಕ್ಕೆ ರೈತರು ಮಾಡಿದ ಮನವಿಗಳಿಂದ ಎಚ್ಚೆತ್ತುಕೊಂಡ ಕೃಷಿ ಸಚಿವ ಬಿ.ಸಿ ಪಾಟೀಲ ವಿಮೆ ಹಣ ಸಂದಾಯಕ್ಕೆ ನೆಡೆಸಿದ ಸಭೆಗಳ ಪ್ರತಿಫಲವಾಗಿ ಇಂದು ಜಿಲ್ಲೆಯ ರೈತರಿಗೆ 77ಕೋಟಿ ಮೊತ್ತ ದೊರೆಯುತ್ತಿದೆ.
ಇದರಿಂದ ಜಿಲ್ಲೆಯಲ್ಲಿನ ರೈತರಿಗೆ ಮುಂಗಾರು ಬೆಳೆಯ ಬೆಳೆವಿಮೆ ಹಣ ಸಿಗುತ್ತಿರೋದು ಖುಷಿ ತಂದಿದ್ದು, ಸರ್ಕಾರಗಳು ಇದೇ ರೀತಿಯಾಗಿ ಸಂಕಷ್ಟದಲ್ಲಿರುವ ರೈತರ ಕೈ ಹಿಡಿಯುವ ಕೆಲಸ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ರೈತರು ಬೆಳೆದ ಬೆಳೆಗಳಿಗೆ ರಾಜ್ಯ ಸರ್ಕಾರ ಸರಿಯಾಗಿ ಪರಿಹಾರ ನೀಡುತ್ತಿಲ್ಲ. ಕಷ್ಟದಲ್ಲಿರುವ ರೈತರ ಬಗ್ಗೆ ಸರ್ಕಾರಗಳಿಗೆ ಕಾಳಜಿ ಇಲ್ಲ ಅನ್ನೋ ಆರೋಪ ಸಾಮಾನ್ಯವಾಗಿತ್ತು. ಆದರೆ, ಇದೀಗ ಧಾರವಾಡ ಜಿಲ್ಲೆಯಲ್ಲಿನ ರೈತರ ಪರ ಕಾಳಜಿ ವಹಿಸಿರುವ ಸರ್ಕಾರ ದೊಡ್ಡ ಮೊತ್ತದ ಪರಿಹಾರವನ್ನು ವಿಮಾ ಕಂಪನಿಯಿಂದ ಕೊಡಿಸಲು ಮುಂದಾಗಿದ್ದು, ರೈತರ ಮೊಗದಲ್ಲಿ ನಗು ತರಿಸಿದ್ದಂತೂ ನಿಜ.....!
Kshetra Samachara
04/01/2021 07:51 pm