ಕಲಘಟಗಿ:ತಾಲೂಕಿನಲ್ಲಿ ಈಗಾಗಲೇ 2020ರ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯನ್ನು ಜಿ.ಪಿ.ಎಸ್ ಆಧಾರಿತ ಮೊಬೈಲ್ ಆ್ಯಪ್ ಬಳಸಿ ನಡೆಸಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಈ ಮಾಹಿತಿಯನ್ನು ಪಹಣಿಯಲ್ಲಿ (ಆರ್.ಟಿ.ಸಿ) ಬೆಳೆ ಕಾಲಂನಲ್ಲಿ ಬೆಳೆ ನಮೂದಿಸಲು ಕೂಡ ಉಪಯೋಗಿಸಲಾಗುತ್ತದೆ. ಆದ್ದರಿಂದ ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಬೆಳಗಳನ್ನು ಸರಿಯಾಗಿ ನಮೂದಿಲಾಗಿದೆಯೇ ಎಂಬುದನ್ನು “ಬೆಳೆದರ್ಶಕ್2020” ಎಂಬ ಆ್ಯಪ್‍ನ್ನು ಪ್ಲೇಸ್ಟೋರ್‍ನಲ್ಲಿ ಡೌನ್‍ಲೋಡ್ಮಾಡಿಕೊಂಡು ನೋಡಬಹುದಾಗಿರುತ್ತದೆ.
ಬೆಳೆಗಳ ಫೋಟೊ ಅಪ್‍ಲೋಡ್ ಮಾಡಿರುವುದರಲ್ಲಿ ಯಾವುದೇ ಲೋಪದೋಷಗಳು ಕಂಡುಬಂದಲ್ಲಿ “ಬೆಳೆದರ್ಶಕ್ 2020” ರ ಆ್ಯಪ್‍ನಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿರುತ್ತದೆ.
ದಾಖಲಾಗಿರುವ ಎಲ್ಲಾ ಆಕ್ಷೇಪಣೆಗಳನ್ನು ಸಂಬಂಧಪಟ್ಟ ಮೇಲ್ವಿಚಾರಕರಿಗೆ ತಂತ್ರಾಂಶದಲ್ಲಿ ಗುರುತಿಸಲಾಗುತ್ತದೆ. ಮೇಲ್ವಿಚಾರಕರು ಆಕ್ಷೇಪಣೆಗಳನ್ನು ಪರಿಶೀಲಿಸಿ ಅವುಗಳನ್ನು ತುರ್ತಾಗಿ ಇತ್ಯರ್ಥಪಡಿಸುವರು.
ಮೇಲ್ವಿಚಾರಕರು ಸ್ವೀಕೃತವಾಗಿರುವ ಪ್ರತಿಯೊಂದು ಆಕ್ಷೇಪಣೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಈಗಾಗಲೇ ಬೆಳೆ ಸಮೀಕ್ಷೆ ದತ್ತಾಂಶದಲ್ಲಿ ಲಭ್ಯವಿರುವ ಬೆಳೆ ಮಾಹಿತಿಯೊಂದಿಗೆ ಹೋಲಿಸಿ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸುವರು.
ಬೆಳೆ ಸಮೀಕ್ಷೆ ದತ್ತಾಂಶದಲ್ಲಿ ಲಭ್ಯವಿರುವ ಬೆಳೆ ಮಾಹಿತಿಯ ಆಧಾರದ ಮೇರೆಗೆ ಇತ್ಯರ್ಥಪಡಿಸಲು ಸಾಧ್ಯವಿಲ್ಲದ ಸನ್ನಿವೇಶದಲ್ಲಿ ಮೇಲ್ವಿಚಾರಕರೇ ಖುದ್ದಾಗಿ ಮಹಜರು ದಾಖಲಿಸುವ ಮೂಲಕ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸುವರು.
ರೈತರು ಆಕ್ಷೇಪಣೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ :15.10.2020 ಆಗಿರುತ್ತದೆ ಎಂದು ತಹಶಿಲ್ದಾರರ ಹಾಗೂ ಕಲಘಟಗಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
20/09/2020 02:46 pm