ಹುಬ್ಬಳ್ಳಿ: ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ ಎನ್ನುವಂತಾಗಿದೆ ಮೆಣಸಿನಕಾಯಿ ಬೆಳೆದ ಅನ್ನದಾತನ ಪರಿಸ್ಥಿತಿ. ಕೆಂಪು ಸುಂದರಿಗೆ ಈಗ ಪುಲ್ ಡಿಮ್ಯಾಂಡ್ ಬಂದಿದ್ದು, ರೈತರು ಹಣೆ ಹಣೆ ಚಚ್ಚಿಕೊಳ್ಳುತ್ತಿದ್ದಾರೆ, ಯಾಕೆ ಅಂತೀರಾ ಈ ವರದಿ ನೋಡಿ..
ಉತ್ತರ ಕರ್ನಾಟಕದಲ್ಲಿ ಸುರಿದ ರಣಭೀಕರ ಮಳೆಗೆ ಉತ್ತರ ಕರ್ನಾಟಕದ ರೈತರು ತತ್ತರಿಸಿ ಹೋಗಿದ್ದರು. ಅದರಲ್ಲೂ ಈರುಳ್ಳಿ ಬೆಳೆದ ರೈತರು ಆಗ ಅಳಿದುಳಿದ ಬೆಳೆ ಮಾರಲು ಹೋದರು ಬೆಲೆ ಸಿಗದೆ ಬೀದಿಗಳಿದು ಹೋರಾಡಿದರು.
ಆದರೆ, ಮೆಣಸಿನಕಾಯಿ ಬೆಳೆದ ರೈತರ ಸ್ಥಿತಿ ಬೇರೆನೆ ಆಗಿದೆ. ಮೆಣಸಿನಕಾಯಿಗೆ ಚಿನ್ನದ ಬೆಲೆ ಬಂದಿದ್ದು, ರೊಕ್ಕ ಕೊಡ್ತಿವಿ ಅಂದ್ರು ಮೆಣಸಿನಕಾಯಿ ಮಾತ್ರ ಸಿಗ್ತಿಲ್ಲ.
ಬ್ಯಾಡಗಿ ತಳಿಯ ಡಬ್ಬಿ ಮೆಣಸಿನಕಾಯಿ ಇದೆ ಮೊದಲ ಬಾರಿಗೆ ಸಾರ್ವಕಾಲಿಕ ದಾಖಲೆ ಬೆಲೆಗೆ ಮಾರಾಟವಾಗುತ್ತಿದೆ. ಕಳೆದ ವರ್ಷ ಕ್ವಿಂಟಾಲಿಗೆ 10 ರಿಂದ 12 ಸಾವಿರಕ್ಕೆ ಮಾರಾಟವಾಗಿದ್ದ ಮೆಣಸಿನಕಾಯಿ ಈ ವರ್ಷ 25 ರಿಂದ 28 ಸಾವಿರಕ್ಕೆ ಮಾರಾಟವಾಗಿದೆ.
ಇನ್ನೂ ಬ್ಯಾಡಗಿ ಕಡ್ಡಿ ತಳಿಯ ಮೆಣಸಿನಕಾಯಿ 20 ಸಾವಿರಕ್ಕೆ ಮಾರಾಟ ವಾಗುತ್ತಿದೆ. ತನ್ನ ಕೆಂಪು ಬಣ್ಣದಿಂದಲೆ ವಿಶ್ವ ಪ್ರಸಿದ್ದಿ ಪಡೆದಿರುವ ಬ್ಯಾಡಗಿ ತಳಿಯ ಕೆಂಪು ಸುಂದರಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಬ್ಯಾಡಗಿಯ ಮೆಣಸಿನಕಾಯಿ ಮಾರುಕಟ್ಟೆ, ಗದಗ ಮತ್ತು ಹುಬ್ಬಳ್ಳಿ ಎಪಿಎಂಸಿಯಲ್ಲಿ ಪ್ರತಿವರ್ಷ ಈ ಸಂದರ್ಭದಲ್ಲಿ ಒಂದು ಲಕ್ಷಕ್ಕು ಹೆಚ್ಚು ಮೆಣಸಿನಕಾಯಿ ಚೀಲಗಳು ಆವಕವಾಗುತ್ತಿತ್ತು, ಆದ್ರೆ ಈ ವರ್ಷ ಮಾತ್ರ ಆವದಲ್ಲಿ ಶೇಕಡಾ 50 ರಷ್ಟು ಕುಸಿದಿದೆ.
ಇದೇ ಮೊದಲ ಬಾರಿಗೆ ಬ್ಯಾಡಗಿ ಮೆಣಸಿನಕಾಯಿ ದಾಖಲೆ ಬೆಲೆಗೆ ಮಾರಾಟವಾಗುತ್ತಿದೆ. ಮೆಣಸಿನ ಬೆಳೆ ಕೈಕೊಟ್ಟಿದ್ದೆ ಬೆಲೆ ಹೆಚ್ವಳಕ್ಕೆ ಕಾರಣವಾಗಿದೆ.
ಧಾರವಾಡ ಜಿಲ್ಲೆಯ ಕುಂದಗೋಳ, ಅಣ್ಣಿಗೇರಿ, ನವಲಗುಂದ ಭಾಗದಲ್ಲಿ ಬ್ಯಾಡಗಿ ತಳಿಯ ಮೆಣಸಿನಕಾಯಿಯನ್ನ ಅತಿ ಹೆಚ್ಚು ಬೆಳೆಯುತ್ತಾರೆ. ಆದ್ರೆ ಉತ್ತರ ಕರ್ನಾಟಕದಲ್ಲಿ ಸುರಿದ ಮಳೆಗೆ ಮೆಣಸಿನಕಾಯಿ ಬೆಳೆ ಸಂಪೂರ್ಣ ಹಾಳಾಗಿದೆ.
ಎಕರೆಗೆ ಹತ್ತು ಹನ್ನೆರಡು ಕ್ವಿಂಟಾಲ್ ಬರಬೇಕಿದ್ದ ಬೆಳೆ ಒಂದರಿಂದ ಎರಡು ಕ್ವಿಂಟಾಲ್ ಬಂದಿದೆ. ಮಳೆಗೆ ಬೆಳೆ ಹಾನಿಯಾಗಿ ಅಳಿದುಳಿದ ಬೆಳೆಯನ್ನ ಮಾರುತ್ತಿದ್ದಾರೆ. ಒಂದೆಡೆ ಹೆಚ್ಚಿನ ಬೆಲೆಗೆ ಮೆಣಸಿನಕಾಯಿ ಮಾರಾಟ ವಾಗುತ್ತಿರುವುದನ್ನ ಕಂಡು ರೈತರು ಖುಷಿ ಪಟ್ರು, ಮತ್ತೊಂದೆಡೆ ಕಣ್ಣೀರು ಹಾಕುತ್ತಿದ್ದಾರೆ. ಉತ್ತಮ ಬೆಲೆ ಇದ್ದಾಗ ಬೆಳೆ ಇಲ್ಲದಂತಾಗಿದೆ.
ಮಳೆಯಿಂದ ಮೆಣಸಿನಕಾಯಿ ಬೆಳೆ ನೆಲಕಚ್ಚಿದ ಪರಿಣಾಮ ಉತ್ತಮ ಬೆಲೆ ಸಿಗುತ್ತಿದೆ. ಆದ್ರೆ ರೈತರ ಬಳಿ ಮೆಣಸಿನಕಾಯಿ ಬೆಳೆ ಇಲ್ಲದಿರುವುದನ್ನ ನೋಡಿದ್ರೆ, ಹಲ್ಲಿದ್ದಾಗ ಕಡ್ಲೆ ಇಲ್ಲ, ಕಡ್ಲೆ ಇದ್ದಾಗ ಹಲ್ಲಿಲ್ಲ ಎನ್ನುವಂತಾಗಿದೆ ಮೆಣಸಿನಕಾಯಿ ಬೆಳೆದ ರೈತರ ಸ್ಥಿತಿ..
Kshetra Samachara
12/12/2020 10:38 am