ಆತ ಪ್ರತಿದಿನ ಅದೇ ರಸ್ತೆಯಲ್ಲಿ ಹಲವು ವರ್ಷಗಳಿಂದ ಬಸ್ ಚಾಲನೆ ಮಾಡುತ್ತಿದ್ದ. ಪ್ರತಿನಿತ್ಯವು ಕೂಡಾ ಸಾವಿರಾರು ಪ್ರಯಾಣಿಕರನ್ನು ಊರಿಂದ ಊರಿಗೆ ಸುರಕ್ಷಿತವಾಗಿ ಮುಟ್ಟಿಸುವ ಕಾಯಕ ಆತನದು. ಇಂದು ಕೂಡಾ ತನ್ನ ಕಾಯಕವನ್ನು ಮಾಡುತ್ತಿದ್ದಾಗ ಬೆಳಗಿನ ಜಾವ ನಡೆದ ದುರ್ಘಟನೆಯಿಂದ ಮತ್ತೆ ಬಾರದ ಲೋಕಕ್ಕೆ ತನ್ನ ಪ್ರಯಾಣವನ್ನು ಬೆಳೆಸಿದ್ದಾನೆ.
ಹೌದು ಹೀಗೆ ಬಸ್ಸಿನಡಿಯಲ್ಲಿ ಸಿಲುಕಿ ಸಾವನಪ್ಪಿದ ಈ ಚಾಲಕನ ಹೆಸರು ರವೀಂದ್ರ. ಲಕ್ಷ್ಮೇಶ್ವರದಿಂದ ಹುಬ್ಬಳ್ಳಿಯತ್ತ 45 ಕ್ಕೂ ಹೆಚ್ಚು ಪ್ರಯಾಣಿಕರನ್ನು ಕರೆತರುತ್ತಿದ್ದಾಗ ಶರೇವಾಡ ಗ್ರಾಮದ ಬಳಿ ಬಸ್ಸಿನ ಮುಂದಿನ ಟೈರ್ ಬ್ಲಾಸ್ಟ್ ಆದ ಪರಿಣಾಮ ಬಸ್ ಪಲ್ಟಿಯಾಗಿ ಚಾಲಕ ಬಸ್ಸಿನಡಿ ಸಿಲುಕಿ ಮೃತಪಟ್ಟರೆ, ಇನ್ನುಳಿದ 5 ಜನರ ಕೈ ಬಸ್ಸಿನಡಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರ ಸಹಾಯದಿಂದ ಬಸ್ ನಲ್ಲಿ ಸಿಲುಕಿದ ಪ್ರಯಾಣಿಕರನ್ನು ರಕ್ಷಣೆ ಮಾಡುವ ಕೆಲಸ ಮಾಡಲಾಯಿತು.
ಟೈರ್ ಬ್ಲಾಸ್ಟ್ ಆಗುತ್ತಿದ್ದ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ನಾವೆಲ್ಲ ಬಸ್ಸಿನ ಗ್ಲಾಸ್ ಒಡೆದು ಹೊರಬಂದು ಪ್ರಾಣವನ್ನು ಉಳಿಸಿಕೊಂಡಿದ್ದೇವೆ ಅಂತಾ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರೊಬ್ಬರು ಹೇಳಿದ್ದಾರೆ. ಇನ್ನು ಅಪಘಾತದಲ್ಲಿ ಒಟ್ಟು 25 ಜನರಿಗೆ ಗಾಯವಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಹಲವು ಪ್ರಯಾಣಿಕರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೂಡಾ ಕೊಡಿಸಲಾಗುತ್ತಿದೆ.
ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
10/10/2022 03:56 pm