ಹುಬ್ಬಳ್ಳಿ: ಅವರೆಲ್ಲ ಖುಷಿಯಿಂದ ಸಂಬಂಧಿಕರ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಮುಗಿಸಿ ಮರಳಿ ತಮ್ಮೂರಿಗೆ ಪ್ರಯಾಣ ಬೆಳೆಸಿದರು. ಇನ್ನೊಂದು ಗಂಟೆ ಆಗಿದ್ದರೆ ಮನೆ ತಲುಪುತ್ತಿದ್ದರೇನೋ? ಆದರೆ ವಿಧಿಯಾಟದಿಂದ ಅದೊಂದು ದುರಂತ ನಡೆದು ಹೋಗಿ,ಇದೀಗ ಇಡೀ ಕುಟುಂಬ ಕಣ್ಣೀರು ಹಾಕುವಂತಾಗಿದೆ.
ಇಲ್ಲಿನ ನವನಗರದ ಬೇವಿನಕಟ್ಟಿ ಕುಟುಂಬಸ್ಥರು ಹಾಗೂ ಸಂಬಂಧಿಕರು ಶನಿವಾರ ಬೆಂಗಳೂರಿನಲ್ಲಿ ತಮ್ಮ ಸಂಬಂಧಿಕರ ಗೃಹ ಪ್ರವೇಶಕ್ಕೆ ತೆರಳಿದರು. ಅಲ್ಲಿ ಖುಷಿಯಿಂದ ಮನೆಯ ಪ್ರವೇಶ ಮುಗಿಸಿ,ರಾತ್ರಿ ವೇಳೆಗೆ ಊಟ ಮುಗಿಸಿ ಅತ್ತೆ, ಮಾವ, ಅಳಿಯ, ಮಗಳು ತಮ್ಮ ಕಾರಿನಲ್ಲಿ ಮರಳಿ ತಮ್ಮೂರು ಹುಬ್ಬಳ್ಳಿಯತ್ತ ಮುಖ ಮಾಡಿದರು.
ಆದರೆ ಬೆಂಗಳೂರಿನಿಂದ ಹುಬ್ಬಳಿಗೆ ಬರುತ್ತಿದ್ದ ಸಂದರ್ಭದಲ್ಲಿ ಜಿಗಳೂರು ಗ್ರಾಮದ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ಕಾರು ಹೈವೆ ಪಕ್ಕದ ದರ್ಗಾಕ್ಕೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ನಾಲ್ವರ ಪೈಕಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಈ ಅಪಘಾತದಲ್ಲಿ ಹನುಮಂತಪ್ಪ ಬೇವಿನಕಟ್ಟಿ, ರೇಣುಕಾ ಬೇವಿನಕಟ್ಟಿ, ಅಳಿಯ ರವೀಂದ್ರ ಸಾವನ್ನಪ್ಪಿದ್ದಾರೆ. ಇನ್ನು ಮಗಳಿಗೆ ಗಂಭೀರ ಗಾಯಗಳಾಗಿದ್ದು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಕಿಮ್ಸ್ ಶವಾಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಒಟ್ಟಿನಲ್ಲಿ ಗೃಹ ಪ್ರವೇಶದಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಗೃಹ ತಲುಪುವ ಮುಂಚೆ ವಿಧಿಯಾಟಕ್ಕೆ ಬಲಿಯಾಗಿದ್ದು ದುರಂತವೇ ಸರಿ.
-ವಿನಯ ರೆಡ್ಡಿ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/08/2022 04:11 pm