ನವದೆಹಲಿ: ಅಂತರರಾಷ್ಟ್ರೀಯ ಯೋಗ ದಿನವಾದ ಇಂದು ಎಲ್ಲರೂ ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿ ಸಮುದ್ರಮಟ್ಟದಿಂದ 17 ಸಾವಿರ ಅಡಿ ಎತ್ತರದಲ್ಲಿನ ಇಂಡೋ- ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯ ಸೈನಿಕರು ಕೊರೆಯುವ ಚಳಿಯಲ್ಲಿ ಪ್ಯಾಂಟ್ ಮಾತ್ರ ಧರಿಸಿ, ಬರಿ ಮೈಯಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಇಷ್ಟೇ ಅಲ್ಲದೆ, ಐಟಿಬಿಪಿ ಹಿಮವೀರರು ಹಿಮಾಚಲ ಪ್ರದೇಶದಲ್ಲಿ ಸಮುದ್ರ ಮಟ್ಟದಿಂದ 16,500 ಅಡಿ ಎತ್ತರವಿರುವ ಪ್ರದೇಶದಲ್ಲಿ ಹಾಗೂ ಉತ್ತರಾಖಂಡದಲ್ಲಿ ಸಮುದ್ರ ಮಟ್ಟದಿಂದ 14,500 ಅಡಿ ಎತ್ತರ ಇರುವ ಪ್ರದೇಶದಲ್ಲಿ ಯೋಗಾಸನ ಮಾಡಿದ್ದಾರೆ. ಯೋಧರ ಯೋಗಾಭ್ಯಾಸದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಸಾಮರ್ಥ್ಯ ಮತ್ತು ಕರ್ತವ್ಯ ನಿಷ್ಠೆ ಹಾಗೂ ಬದ್ಧತೆಯನ್ನು ನೋಡಿ ಭಾರೀ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
PublicNext
21/06/2022 12:54 pm