ದಾವಣಗೆರೆ: ಮದುವೆ ಮನೆಯಲ್ಲಿ ಶಾವಿಗೆ ಪಾಯಸ ಊಟ ಮಾಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದ ಘಟನೆ ಜಗಳೂರಿನಲ್ಲಿ ನಡೆದಿದೆ.
ಜಗಳೂರು ತಾಲೂಕಿನ ಗೌಡಗೊಂಡನಹಳ್ಳಿಯಲ್ಲಿ ಮದುವೆ ಇತ್ತು. ಮದುವೆಗೆ ಬಂದಿದ್ದ 9 ಮಕ್ಕಳೂ ಸೇರಿದಂತೆ 30ಕ್ಕೂ ಹೆಚ್ಚು ಜನರು ಅಸ್ವಸ್ಥರಾದರು. ಕೂಡಲೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನೀಡಿದ ಹಿನ್ನೆಲೆಯಲ್ಲಿ ಚೇತರಿಸಿಕೊಂಡಿದ್ದಾರೆ.
ವಿವಾಹ ಕಾರ್ಯಕ್ರಮದಲ್ಲಿ ಊಟ ಮಾಡಿದ ಬಹುತೇಕರಿಗೆ ವಾಂತಿ, ಬೇದಿ, ತಲೆ ಸುತ್ತು ಬಂದ ಪರಿಣಾಮ ತಕ್ಷಣವೇ ಎಲ್ಲರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ. ತೀವ್ರವಾಗಿ ಅಸ್ವಸ್ಥರಾಗಿರುವ 23 ಜನರನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಏಳು ಜನರು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.
ಅಸ್ವಸ್ಥರಾಗಿದ್ದವರಲ್ಲಿ 9 ಮಕ್ಕಳಿದ್ದು ನಾಲ್ಕು ಗಂಡು ಮತ್ತು ಐವರು ಹೆಣ್ಣಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಮಹಿಳೆಯರು ಸಹ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದರು.
ಶಾವಿಗೆ ಪಾಯಸದ ಎಫೆಕ್ಟ್:
ಮದುವೆಯಲ್ಲಿ ಮಾಡಿಸಿದ್ದ ಶಾವಿಗೆ ಪಾಯಸ ಸೇವಿಸಿದ್ದೇ ಅಸ್ವಸ್ಥರಾಗಲು ಕಾರಣ ಎನ್ನಲಾಗಿದೆ. ಮೊದಲನೇ ಪಂಕ್ತಿಯಲ್ಲಿ ಊಟ ಸೇವಿಸಿದವರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಆದರೆ ಮೂರ್ನಾಲ್ಕು ಪಂಕ್ತಿ ಆದ ಮೇಲೆ ಪಾಯಸ ಊಟ ಮಾಡಿದವರಲ್ಲಿ ವಾಂತಿ, ಬೇದಿ, ಸುಸ್ತು ಹೆಚ್ಚಾಗಿದ್ದರಿಂದ ಅವರನ್ನೆಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ದಾಖಲಾದ ಎಲ್ಲಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯಾರಿಗೂ ಗಂಭೀರ ಸಮಸ್ಯೆಯಾಗಿಲ್ಲ. ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಸುಸ್ತಾಗಿದ್ದು ಅವರಿಗೆ ವಿಶೇಷವಾಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ" ಎಂದು ಜಗಳೂರು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಬಿ.ವಿ.ನೀರಜ್ ಸ್ಪಷ್ಟನೆ ನೀಡಿದ್ದಾರೆ.
PublicNext
08/06/2022 12:21 pm