ನವದೆಹಲಿ: ಹೆಮ್ಮಾರಿ ಸೋಂಕಿನಿಂದ ಜನ ತತ್ತರಿಸಿಹೋಗಿದ್ದಾರೆ. ಸದ್ಯ ಸೋಂಕಿನ 3ನೇ ಅಲೆಯ ಆರ್ಭಟದ ನಡುವೆ ಭಾರತದಲ್ಲಿ ಸೋಂಕು ಪ್ರಮಾಣ ಕ್ರಮೇಣ ಇಳಿಕೆಯಾಗುತ್ತಿದೆ. ಇದರ ಮಧ್ಯೆ ಕೊರೊನಾ ಔಷಧಿ ಕುರಿತ ಆಶಾದಾಯಕ ಸುದ್ದಿಯೊಂದು ಹೊರ ಬಿದ್ದಿದೆ.
ಹೌದು.. ಪ್ರಾಯೋಗಿಕ ಕೋವಿಡ್-19 ಮಾತ್ರೆಯು ಕೊರೊನಾ ವೈರಸ್ ಸೋಂಕಿಗೆ ಒಳಗಾದ ಜನರಲ್ಲಿ ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವಿನ ಸಾಧ್ಯತೆಯನ್ನು ಅರ್ಧದಷ್ಟು ಕಡಿಮೆ ಮಾಡಿದೆ. ಈ ಮಾತ್ರೆಯನ್ನು ಕೋವಿಡ್ ರೋಗಿಗಳ ಬಳಕೆಗೆ ಅಧಿಕೃತಗೊಳಿಸಲು ಅಮೆರಿಕ ಮತ್ತು ಪ್ರಪಂಚದಾದ್ಯಂತದ ಇರುವ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸುವುದಾಗಿ ಹೇಳಿದೆ ಎಂದು ಔಷಧ ತಯಾರಿಕಾ ಕಂಪನಿ ಮರ್ಕ್ ಮತ್ತು ಕೋ ಹೇಳಿದೆ.
ಒಂದೊಮ್ಮೆ ಈ ಮಾತ್ರೆಗೆ ಅನುಮೋದನೆ ಸಿಕ್ಕರೆ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಪ್ರಯತ್ನದಲ್ಲಿ ಪ್ರಮುಖ ಮುನ್ನಡೆಯಾಗಲಿದೆ. ಈ ಮೊಲ್ನುಪಿರವಿರ್ ಕೋವಿಡ್-19ಗೆ ಚಿಕಿತ್ಸೆ ನೀಡಬಹುದಾದದ ಮೊದಲ ಮಾತ್ರೆಯಾಗಲಿದೆ. ಮೊಲ್ನುಪಿರವಿರ್ ಎಂದು ಕರೆಯಲ್ಪಡುವ ಈ ಮಾತ್ರೆಯನ್ನು ಪಡೆದ ರೋಗಿಗಳಲ್ಲಿ ಕೋವಿಡ್ -19 ರೋಗಲಕ್ಷಣಗಳು ಐದು ದಿನಗಳೊಳಗೆ ಕಡಿಮೆ ಆಗಿದ್ದು, ಅರ್ಧದಷ್ಟು ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವಿನ ಪ್ರಮಾಣ ಕಡಿಮೆಯಾಗಿದೆ ಎಂದು ಮರ್ಕ್ ಮತ್ತು ಅದರ ಪಾಲುದಾರ ರಿಡ್ಜ್ ಬ್ಯಾಕ್ ಬಯೋಥೆರಪೆಟಿಕ್ಸ್ ಸಂಸ್ಥೆ ಹೇಳಿದೆ.
ಮೆರ್ಕ್ ಮತ್ತು ರಿಡ್ಜ್ಬ್ಯಾಕ್ ಬಯೋಥೆರಪ್ಯೂಟಿಕ್ ಅಕ್ಟೋಬರ್ 2 ರಂದು ಮಾಡಿದ ಪ್ರಕಟಣೆಯ ಪ್ರಕಾರ ಸೌಮ್ಯ ಮತ್ತು ಮಧ್ಯಮ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಭರವಸೆಯಿದೆ. ಪ್ರಮುಖವಾಗಿ ಸ್ಥೂಲಕಾಯ, ಮಧುಮೇಹ ಅಥವಾ ಹೃದ್ರೋಗದಂತಹ ಆರೋಗ್ಯ ಸಮಸ್ಯೆಗಳಿಂದಾಗಿ ಕೋವಿಡ್ನಿಂದ ಹೆಚ್ಚು ಅಪಾಯವೆಂದು ಪರಿಗಣಿಸಲ್ಪಟ್ಟ ಮಧ್ಯಮ ಪ್ರಮಾಣದ ಕೋವಿಡ್ -19 ಲಕ್ಷಣಗಳನ್ನು ಹೊಂದಿರುವ 775 ವಯಸ್ಕರ ಮೇಲೆ ಈ ಅಧ್ಯಯನ ನಡೆಸಲಾಗಿದೆ. ಮೆರ್ಕ್ ಸಂಸ್ಥೆಯ ವರದಿಯನ್ನು ಸದ್ಯ ಯಾವುದೇ ಉನ್ನತ ವೈದ್ಯಕೀಯ ತಂಡ ಪರಿಶೀಲನೆ ನಡೆಸಿಲ್ಲ. ಭವಿಷ್ಯದ ವೈದ್ಯಕೀಯ ಪರಿಶೀಲನೆಯಲ್ಲಿ ಅದನ್ನು ಪ್ರಸ್ತುತಪಡಿಸಲು ಯೋಜಿಸಲಾಗಿದೆ ಎಂದು ಮರ್ಕ್ ಹೇಳಿದೆ.
ವೈದ್ಯರು ಇದು ಕೋವಿಡ್ ರೋಗಿಗಳಿಗೆ ಆರಂಭಿಕ ಹಂತದಲ್ಲಿ ಚಿಕಿತ್ಸೆ ನೀಡಲು ಉಪಯುಕ್ತ ಎಂದು ಹೇಳಲಾಗಿದ್ದು, ಏಕೆಂದರೆ ಆಸ್ಪತ್ರೆಯಲ್ಲಿನ ರೋಗಿಗಳ ಸಾವಿನ ಶೇ.50 ಇಳಿಕೆಯಾಗಿದೆ ಎಂದು ಹೇಳಲಾಗಿದೆ.
PublicNext
05/10/2021 02:52 pm