ಮೊರದಾಬಾದ್: ದೇಶದಲ್ಲಿ ಕೊರೊನಾ ಲಸಿಕೆ ಹಂಚಿಕೆ ಅಭಿಯಾನ ಆರಂಭವಾಗಿದೆ.
ಡೆಡ್ಲಿ ಸೋಂಕಿಗೆ ಮದ್ದು ಲಭಿಸಿರುವ ಹಿನ್ನೆಲೆಯಲ್ಲಿ ಎಲ್ಲೇಡೆ ವ್ಯಾಕ್ಸಿನ್ ಹಂಚುವ ಕಾರ್ಯ ಚುರುಕಾಗಿದೆ ಇದರ ನಡುವೆ ನಿನ್ನೆ ಕೊವಿಡ್-19 ಲಸಿಕೆಯನ್ನು ಪಡೆದಿದ್ದ 46 ವರ್ಷದ ಆರೋಗ್ಯ ಕಾರ್ಯಕರ್ತನೊಬ್ಬ ಇಂದು ಮೃತಪಟ್ಟಿದ್ದಾಗಿ ಪಿಟಿಐ ವರದಿ ಮಾಡಿದೆ.
ಆದರೆ ಈ ಸಾವಿನ ವಿಚಾರದಲ್ಲಿ ಗೊಂದಲ ಇದ್ದು, ಲಸಿಕೆ ಪಡೆದಿದ್ದರಿಂದಲೇ ಹೀಗಾಗಿದೆಯಾ ಎಂಬುದು ಸ್ಪಷ್ಟವಾಗಿಲ್ಲ.
ಉತ್ತರಪ್ರದೇಶದ ಮೊರದಾಬಾದ್ ಸರ್ಕಾರಿ ಆಸ್ಪತ್ರೆಯಲ್ಲಿ ವಾರ್ಡ್ಬಾಯ್ ಆಗಿದ್ದ ಮಹಿಪಾಲ್ ಶನಿವಾರ ಕೊವಿಶೀಲ್ಡ್ ಲಸಿಕೆ ಪಡೆದಿದ್ದರು.
ಲಸಿಕೆ ತೆಗೆದುಕೊಂಡ ಬಳಿಕ ಅಸ್ವಸ್ಥನಾಗಿ ಸಾವನ್ನಪ್ಪಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಇದನ್ನು ಸ್ಥಳೀಯ ಆಡಳಿತ ನಿರಾಕರಿಸಿದ್ದು, ಮಹಿಪಾಲ್ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಹಾಗಾಗಿ ಮರಣ ಹೊಂದಿದ್ದಾನೆ ಎಂದು ಹೇಳಿದೆ.
ಈ ವಾದವನ್ನು ಕುಟುಂಬದವರು ಒಪ್ಪುತ್ತಿಲ್ಲ. ಮಹಿಪಾಲ್ ಗೆ ಜ್ವರ ಹಾಗೂ ಕೆಮ್ಮು ಬಿಟ್ಟರೆ ಇನ್ಯಾವುದೇ ರೋಗವೂ ಇರಲಿಲ್ಲ ಎಂದು ಹೇಳುತ್ತಿದ್ದಾರೆ.
ಲಸಿಕೆ ತೆಗೆದುಕೊಂಡ ಹಲವರು ಜ್ವರದಿಂದ ಬಳಲುತ್ತಿರುವುದು ಸತ್ಯ. ಆದರೆ ರಾಜ್ಯದಲ್ಲಿ ಎಲ್ಲಿಯೂ, ಯಾರಿಗೂ ಅಡ್ಡಪರಿಣಾಮ ಉಂಟಾಗಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಲಸಿಕೆಗಳು ಸುರಕ್ಷಿತವಾಗಿವೆ. ಮಹಿಪಾಲ್ ಪ್ರಕರಣ ಭಿನ್ನವಾಗಿದೆ. ಈ ಸಾವಿನ ಬಗ್ಗೆ ಉನ್ನತ ಮಟ್ಟದ ಪರಿಶೀಲನೆ ಮಾಡಲು ವೈದ್ಯರ ತಂಡ ರಚಿಸಲಾಗುವುದು ಎಂದು ಮೊರದಾಬಾದ್ ಜಿಲ್ಲಾಧಿಕಾರಿ ರಾಕೇಶ್ ಸಿಂಗ್ ತಿಳಿಸಿದ್ದಾರೆ.
PublicNext
18/01/2021 04:42 pm