ಪುರುಷರ ಆರೋಗ್ಯಕ್ಕೆ ಹೋಲಿಸಿದರೆ ಮಹಿಳೆಯರ ಆರೋಗ್ಯದಲ್ಲಿ ಸಾಕಷ್ಟು ಏರಿಳಿತಗಳು ಕಂಡು ಬರುತ್ತವೆ. ಇದಕ್ಕೆ ಕಾರಣ ಮಹಿಳೆಯರ ದೇಹದ ರಚನೆ ಮತ್ತು ಹಾರ್ಮೋನುಗಳ ಬದಲಾವಣೆಗಳು.
ಮಹಿಳೆಯರು ತಮ್ಮ ದೇಹದ ಆರೋಗ್ಯದ ಬಗ್ಗೆ ಸಾಕಷ್ಟು ಆಯಾಮದಲ್ಲಿ ಗಮನ ಹರಿಸಬೇಕಾಗುತ್ತದೆ.
ಮದುವೆಗೆ ಮುಂಚೆ ಮತ್ತು ಮದುವೆಯ ನಂತರದಲ್ಲಿ ಗರ್ಭಾವಸ್ಥೆಗೆ ಮುಂಚೆ ಕೆಲವೊಂದು ಪರೀಕ್ಷೆಗಳನ್ನು ಕಡ್ಡಾಯವಾಗಿ ಸ್ತ್ರೀ ರೋಗ ತಜ್ಞರ ಬಳಿ ಮಾಡಿಸಿಕೊಳ್ಳಬೇಕಾಗುತ್ತದೆ.
ಮಹಿಳೆಯರಿಗೆ ಇದು ಅನಿವಾರ್ಯ ಎಂದು ಆರೋಗ್ಯಕ್ಕೆ ಸಂಬಂಧ ಪಟ್ಟ ಸಂಶೋಧನೆಗಳು ಹೇಳುತ್ತವೆ.
ಹಾಗಾಗಿ ಈ ಕೆಳಗಿನ ಬಹು ಮುಖ್ಯವಾದ ಪರೀಕ್ಷೆಗಳನ್ನು ಇಲ್ಲಿ ತಿಳಿಸಿ ಕೊಡಲಾಗಿದೆ.
ರಕ್ತ ಪರೀಕ್ಷೆ
•ರಕ್ತ ಪರೀಕ್ಷೆ ನಡೆಸುವ ಮೂಲಕ ದೇಹದಲ್ಲಿ ಕಬ್ಬಿಣದ ಅಂಶ ಯಾವ ಪ್ರಮಾಣದಲ್ಲಿ ಇದೆ ಎಂಬುದನ್ನು ಪತ್ತೆ ಹಚ್ಚಬಹುದು. ಮದುವೆಯ ನಂತರ ಗರ್ಭಿಣಿ ಆಗುವ ಸಾಧ್ಯತೆ ಇರುವುದರಿಂದ ಮಹಿಳೆಯರಿಗೆ ದೇಹದಲ್ಲಿ ಕಬ್ಬಿಣದ ಅಂಶದ ಪ್ರಮಾಣ ಹೆಚ್ಚಾಗಿ ಇರಬೇಕಾಗುತ್ತದೆ.
•ಒಂದು ವೇಳೆ ಕಬ್ಬಿಣದ ಅಂಶ ಕಡಿಮೆ ಇದ್ದರೆ ಅನೀಮಿಯ ಸಮಸ್ಯೆ ಇರುವುದು ತಿಳಿದು ಬರುತ್ತದೆ. ಹಾಗಾಗಿ ಮದುವೆಯ ನಂತರದ ಗರ್ಭಾವಸ್ಥೆಯ ಬಗ್ಗೆ ಮೊದಲೇ ನಿರ್ಧಾರ ಮಾಡಿಕೊಳ್ಳಬಹುದು
ಥೈರಾಯ್ಡ್ ಹಾರ್ಮೋನ್ ಪರೀಕ್ಷೆ
•ಮಹಿಳೆಯರ ದೇಹದಲ್ಲಿ ಥೈರಾಯ್ಡ್ ಗ್ರಂಥಿ ಇಂದ ಸ್ರವಿಸುವ ಥೈರಾಯ್ಡ್ ಹಾರ್ಮೋನ್ ಸಾಕಷ್ಟು ಪ್ರಭಾವಗಳನ್ನು ಬೀರುತ್ತದೆ ಎಂದು ಹೇಳುತ್ತಾರೆ.
•ಇದರಲ್ಲಿ ಮಹಿಳೆಯರ ಫಲವತ್ತತೆ ಮುಟ್ಟಿನ ಅವಧಿ ದೇಹದಲ್ಲಿ ರಕ್ತ ಸಂಚಾರ ದೇಹದ ತೂಕ ಹೆಚ್ಚು ಅಥವಾ ಕಡಿಮೆ ಆಗುವುದು ಇತ್ಯಾದಿ ಅಂಶಗಳು ಒಳಗೊಂಡಿರುತ್ತವೆ.
•ಗರ್ಭಾವಸ್ಥೆಯ ನಂತರದಲ್ಲಿ ದೇಹದಲ್ಲಿ ಕಂಡು ಬರುವ ಇನ್ನಿತರ ಹಾರ್ಮೋನುಗಳ ಬದಲಾವಣೆಯಿಂದ ಮತ್ತಷ್ಟು ಏರುಪೇರಾಗುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಮದುವೆಗೆ ಮುಂಚೆ ತಿಳಿದುಕೊಳ್ಳುವುದು ಒಳ್ಳೆಯದು.
ಲಿಪಿಡ್ ಪ್ರೊಫೈಲ್ ಪರೀಕ್ಷೆ
•ಮಹಿಳೆಯರ ದೇಹದಲ್ಲಿ ಸದ್ಯದ ಕೊಲೆಸ್ಟ್ರಾಲ್ ಅಂಶವನ್ನು ಪತ್ತೆ ಹಚ್ಚಿ ರಕ್ತದ ಒತ್ತಡ ಮತ್ತು ಇನ್ನಿತರ ಹೃದಯದ ಸಮಸ್ಯೆಗಳನ್ನು ಕಂಡು ಹಿಡಿಯಲು ಅನುಕೂಲವಾಗುವಂತಹ ಪರೀಕ್ಷೆ ಎಂದರೆ ಅದು ಲಿಪಿಡ್ ಪ್ರೊಫೈಲ್ ಪರೀಕ್ಷೆ.
•ಮದುವೆಗೆ ಮುಂಚೆ ಈ ಒಂದು ಪರೀಕ್ಷೆ ಕೂಡ ತುಂಬಾ ಅಗತ್ಯ ಎಂದು ಹೇಳಲಾಗುತ್ತದೆ. ಏಕೆಂದರೆ ಗರ್ಭಾವಸ್ಥೆಯ ದಿನಗಳಲ್ಲಿ ಹಾರ್ಮೋನುಗಳ ಬದಲಾವಣೆಯಿಂದ ರಕ್ತದ ಒತ್ತಡ ಮತ್ತು ಹೃದಯದ ಆರೋಗ್ಯದಲ್ಲಿ ಅಲ್ಪ ಸ್ವಲ್ಪ ಏರುಪೇರು ಉಂಟಾಗುವ ಸಾಧ್ಯತೆ ಇರುತ್ತದೆ ಹಾಗಾಗಿ ಈ ಬಗ್ಗೆ ಮೊದಲೇ ಮಾಹಿತಿ ಕಲೆ ಹಾಕಿಕೊಳ್ಳುವುದು ತುಂಬಾ ಒಳ್ಳೆಯದು.
ಸೋಂಕು ನಿರ್ಣಾಯಕ ಪರೀಕ್ಷೆ
•ಮದುವೆಗೆ ಮುಂಚೆ ನಮ್ಮ ಆರೋಗ್ಯದ ಬಗ್ಗೆ ನಾವು ತಿಳಿದುಕೊಳ್ಳುವುದು ತುಂಬಾ ಅನಿವಾರ್ಯ.
•ಒಂದು ವೇಳೆ ನಿಮ್ಮ ದೇಹದಲ್ಲಿ ಎಚ್ ಐ ವಿ ಅಥವಾ ಹೆಪಟೈಟಿಸ್ ' ಬಿ ' ತರಹದ ಸೋಂಕು ಉಂಟಾಗಿದ್ದರೆ ಅದನ್ನು ಮದುವೆಗೆ ಮುಂಚೆ ರಕ್ತ ಪರೀಕ್ಷೆಯ ಮೂಲಕ ಪತ್ತೆ ಮಾಡಿಕೊಳ್ಳುವುದು ತುಂಬಾ ಒಳ್ಳೆಯದು.
•ಏಕೆಂದರೆ ಇಂತಹ ಸೋಂಕುಗಳು ನಿಮ್ಮಿಂದ ನಿಮ್ಮ ಸಂಗಾತಿಗೆ ವರ್ಗಾವಣೆಯಾಗುವ ಸಾಧ್ಯತೆ ಇರುವುದರಿಂದ ಮದುವೆಯ ನಂತರದಲ್ಲಿ ನಿಮಗೆ ಬೇರೆ ಬಗೆಯ ತೊಂದರೆಗಳು ಉಂಟಾಗಬಾರದು ಎನ್ನುವ ಕಾರಣದಿಂದ ಈ ಸಮಯದಲ್ಲಿ ಪರೀಕ್ಷೆ ಅತ್ಯಗತ್ಯ.
ರಕ್ತದಿಂದ ಮಧುಮೇಹ ಪರೀಕ್ಷೆ
•ಮಧುಮೇಹ ಸಮಸ್ಯೆ ಒಮ್ಮೆ ಬಂದು ಅಂಟಿಕೊಂಡರೆ ಇಡೀ ಜೀವನ ಪರ್ಯಂತ ಹೆಣಗಾಡಿಸುತ್ತದೆ.
•ಹಾಗಾಗಿ ಮದುವೆಯ ನಂತರ ನಿಮ್ಮಿಂದ ನಿಮ್ಮ ಗಂಡನ ಮನೆಯವರಿಗೆ ಕಿರಿಕಿರಿ ಉಂಟಾಗಬಾರದು ಎನ್ನುವ ಕಾರಣಕ್ಕೆ ರಕ್ತ ಪರೀಕ್ಷೆಯ ಮೂಲಕ ನಿಮ್ಮ ದೇಹದ ಆರೋಗ್ಯ ಸ್ಥಿತಿಯನ್ನು ಮೊದಲು ಪತ್ತೆ ಹಚ್ಚಿಕೊಳ್ಳಿ.
ಹಿಮೋಗ್ಲೋಬಿನ್ ಮಟ್ಟದ ಪರೀಕ್ಷೆ
•ಈ ಪರೀಕ್ಷೆಯಲ್ಲಿ ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಅಂಶದಲ್ಲಿ ಯಾವುದೇ ಕುಂದು ಕೊರತೆ ಕಂಡು ಬಂದರೆ ಅದನ್ನು ನೀವು ತಿಳಿದುಕೊಳ್ಳಬಹುದು.
•ಇದರ ಜೊತೆಗೆ ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಯಾವ ಮಟ್ಟದಲ್ಲಿದೆ ಎಂಬುದನ್ನು ಸಹ ಪತ್ತೆ ಹಚ್ಚಬಹುದು.
•ಏಕೆಂದರೆ ನೀವು ಈಗಾಗಲೇ ಗರ್ಭಾವಸ್ಥೆಗಾಗಿ ಪ್ಲಾನ್ ಮಾಡಿದ್ದರೆ. ನಿಮ್ಮ ದೇಹದಲ್ಲಿ ಇರುವ ಅನುವಂಶೀಯ ಪ್ರಮಾಣಗಳು ಶೇಕಡ 25 % ನಿಮ್ಮ ಮಗುವಿಗೆ ವರ್ಗಾವಣೆಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಪರೀಕ್ಷೆ ಕೂಡ ಗರ್ಭಾವಸ್ಥೆಗೆ ಮುನ್ನ ಅಥವಾ ಮದುವೆಗೆ ಮುಂಚೆ ಮಾಡಿಸಿಕೊಳ್ಳುವುದು ಒಳ್ಳೆಯದು.
ರುಬೆಲ್ಲಾ IgG ಪರೀಕ್ಷೆ
•ಇದೊಂದು ಸೋಂಕು ಪತ್ತೆ ಹಚ್ಚುವ ಪರೀಕ್ಷೆಯಾಗಿದ್ದು ನಿಮ್ಮ ದೇಹದಲ್ಲಿ ' ರುಬೆಲ್ಲಾ ' ಅಥವಾ ' ಜರ್ಮನ್ ಮೀಸಲ್ಸ್ ' ಸೋಂಕು ಇದೆಯೆ ಅಥವಾ ಇಲ್ಲವೇ ಎಂಬುದನ್ನು ಇದರಿಂದ ಕಂಡು ಹಿಡಿಯಬಹುದಾಗಿದೆ.
•ನಿಮ್ಮ ದೇಹದ ರೋಗ - ನಿರೋಧಕ ಶಕ್ತಿಯ ಮೇಲೆ ನೇರವಾಗಿ ಹೊಡೆತ ಉಂಟು ಮಾಡುವ ಈ ಸೋಂಕಿನಿಂದ ನಿಮಗೆ ಗರ್ಭಾವಸ್ಥೆಯಲ್ಲಿ ಗರ್ಭಪಾತ ಆಗುವ ಸಂದರ್ಭ ಹೆಚ್ಚು ಎಂದು ಸಾಮಾನ್ಯವಾಗಿ ಸೂಚಿಸುವ ಸೋಂಕು ಇದಾಗಿದೆ.
AMH ಹಾರ್ಮೋನ್ ಪರೀಕ್ಷೆ
•ಮಹಿಳೆಯರ ಫಲವತ್ತತೆಯ ಮೇಲೆ ನೇರವಾದ ಪ್ರಭಾವ ಬೀರುವ AMH ಅಥವಾ ' Anti Mullerian Harmone'ಮಹಿಳೆಯರು ಗರ್ಭಧರಿಸುವ ಸಾಧ್ಯತೆ ಎಷ್ಟಿದೆ ಎಂಬುದನ್ನು ಸೂಚಿಸುತ್ತದೆ.
•ಕೆಲವರಿಗೆ ಎಷ್ಟೇ ಬಾರಿ ಪ್ರಯತ್ನ ಪಟ್ಟರೂ ಗರ್ಭ ಧರಿಸುವುದು ಸಾಧ್ಯ ಆಗುವುದಿಲ್ಲ. ಇದರ ಜೊತೆಗೆ ಗರ್ಭ ಧರಿಸಲು ತೊಂದರೆ ಆಗುತ್ತಿರುವ ಇನ್ನಿತರ ಕಾರಣಗಳನ್ನು ಈ ಹಾರ್ಮೋನ್ ಪರೀಕ್ಷೆಯಿಂದ ಕಂಡು ಹಿಡಿದುಕೊಳ್ಳಬಹುದು.
ಮ್ಯಾಮೋಗ್ರಫಿ
•ಇದೊಂದು ಸ್ತನ ಕ್ಯಾನ್ಸರ್ ಪರೀಕ್ಷೆಯಾಗಿದ್ದು ಮದುವೆಗೆ ಮುಂಚೆ ಮಹಿಳೆಯರು ತಮ್ಮ ದೈಹಿಕ ಆರೋಗ್ಯದ ಬಗ್ಗೆ ತಿಳಿದುಕೊಳ್ಳುವುದು ಅತ್ಯುತ್ತಮವಾಗಿದೆ ಎಂದು ಸೂಚಿಸುವ ಪರೀಕ್ಷೆ ಇದಾಗಿದೆ.
•ಮದುವೆಗೆ ಮುಂಚೆ ಮಹಿಳೆಯರು ಈ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ನಂತರದಲ್ಲಿ ತೊಂದರೆ ಮತ್ತು ಕಿರಿಕಿರಿ ಅನುಭವಿಸುವುದು ತಪ್ಪುತ್ತದೆ.
ಪ್ಯಾಪ್ ಸ್ಮಿಯರ್ ಪರೀಕ್ಷೆ
•ಗರ್ಭಕಂಠದ ಕ್ಯಾನ್ಸರ್ ಸಮಸ್ಯೆಯನ್ನು ಪತ್ತೆ ಹಚ್ಚುವ ಪರೀಕ್ಷೆಗೆ ಪ್ಯಾಪ್ ಸ್ಮಿಯರ್ ಪರೀಕ್ಷೆ ಎಂದು ಕರೆಯುತ್ತಾರೆ. ದೇಹದ ಆಂತರಿಕವಾಗಿ ನಡೆಸಲಾಗುವ ಈ ಪರೀಕ್ಷೆ ಮುಖ್ಯವಾಗಿ ಗರ್ಭಕಂಠದ ಕುತ್ತಿಗೆಯ ಭಾಗದಲ್ಲಿ ನಡೆಸಲಾಗುತ್ತದೆ.
•ಸ್ತ್ರೀರೋಗ ತಜ್ಞರು ಪ್ಯಾಪ್ ಸ್ಮಿಯರ್ ಪರೀಕ್ಷೆಯನ್ನು ನಡೆಸುವ ಮೂಲಕ ಗರ್ಭ ಕೋಶದಲ್ಲಿ ಅಥವಾ ಗರ್ಭ ಕಂಠದ ಭಾಗದಲ್ಲಿ ಕ್ಯಾನ್ಸರ್ ಜೀವ ಕೋಶಗಳು ಬೆಳವಣಿಗೆ ಆಗುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ.
•ಮಹಿಳೆಯರು ಮುಂಜಾಗರೂಕತಾ ಕ್ರಮವಾಗಿ ತಮ್ಮ ಆರೋಗ್ಯ ರಕ್ಷಣೆಗಾಗಿ ಪ್ರತಿ ಮೂರು ವರ್ಷಗಳಿಗೊಮ್ಮೆ ಈ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ತುಂಬಾ ಉತ್ತಮ. ಯಾವುದಕ್ಕೂ ಒಮ್ಮೆ ನಿಮ್ಮ ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗಿ ಮಾಹಿತಿ ಪಡೆದುಕೊಳ್ಳಿ.
ಮೂಳೆಗಳ ಖನಿಜಾಂಶ ಪರೀಕ್ಷೆ
•ಮಹಿಳೆಯರಲ್ಲಿ ' ಆಸ್ಟಿಯೋಪೋರೋಸಿಸ್ ' ಮತ್ತು ' ಆಸ್ಟಿಯೋಪೀನಿಯ ' ಸಮಸ್ಯೆಯನ್ನು ಸುಲಭವಾಗಿ ಪತ್ತೆ ಹಚ್ಚುವ ಪರೀಕ್ಷೆ ಇದಾಗಿದೆ.
•ಯಾವುದೇ ಕ್ಷಣದಲ್ಲಿ ಮೂಳೆಗಳು ಸವೆಯುವ ಬಗ್ಗೆ ಈ ಪರೀಕ್ಷೆ ತಿಳಿಸಿ ಹೇಳುತ್ತದೆ. ಇದರಿಂದ ಮುಂಬರುವ ದಿನಗಳಲ್ಲಿ ನಾವು ನಮ್ಮ ದೇಹದ ಯಾವ ಭಾಗದ ಮೂಳೆಗಳ ವಿಚಾರವಾಗಿ ತುಂಬಾ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂಬುದನ್ನು ತಿಳಿದು ಕೊಳ್ಳಬಹುದಾಗಿದೆ.
ಪೆಲ್ವಿಕ್ ಸೋನೋಗ್ರಫಿ
•ಈ ಪರೀಕ್ಷೆಯಲ್ಲಿ ಮಹಿಳೆಯರ ಸೊಂಟದ ಭಾಗದ ಎಲ್ಲಾ ಅಂಗಾಂಗಗಳ ಸದ್ಯದ ಪರಿಸ್ಥಿತಿಯ ಫಲಿತಾಂಶ ಒಟ್ಟಾರೆಯಾಗಿ ದೊರಕುತ್ತದೆ ಎಂದು ಹೇಳಬಹುದು.
•ಅಂಡಾಶಯಗಳು ಊದಿಕೊಳ್ಳುವುದು, ಫೈಬ್ರಾಯ್ಡ್ ಅಥವಾ ಗರ್ಭ ಕೋಶದ ಒಳ ಭಾಗ ದಪ್ಪವಾಗಿರುವುದು ಈ ಪರೀಕ್ಷೆಯಿಂದ ಕಂಡು ಹಿಡಿಯಬಹುದು.
•ಅಂಡಾಶಯಗಳಿಗೆ ಸಂಬಂಧ ಪಟ್ಟಂತೆ ಇರುವ ಸಮಸ್ಯೆಯನ್ನು ಆರಂಭದಲ್ಲಿ ಪತ್ತೆ ಹಚ್ಚಬಹುದಾದ ಪರೀಕ್ಷೆ ಇದಾಗಿದೆ.
ಕೃಪೆ : ವಿ.ಕ
PublicNext
15/12/2020 01:08 pm